ಅತ್ಯಾಚಾರ ಪ್ರಕರಣದಲ್ಲಿ ಮುಸ್ಲಿಂ ವ್ಯಾಪಾರಿಯನ್ನು ಸಿಲುಕಿಸಲು ನನ್ನನ್ನು ಬಳಸಲಾಗಿತ್ತು: ಮಹಿಳೆ ಆರೋಪ

Update: 2022-07-24 13:49 GMT
ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡುತ್ತಿರುವ ಹಿಂದುತ್ವ ಸಂಘಟನೆ ಮುಖಂಡರು Pic: Piyush Rai/Twitter

ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಮುಸ್ಲಿಂ ಉದ್ಯಮಿಯೋರ್ವರನ್ನು ಸಿಲುಕಿಸುವ ಸಲುವಾಗಿ ನನ್ನನ್ನು ಇಬ್ಬರು ವ್ಯಕ್ತಿಗಳು ಬಳಸಿದ್ದರು ಎಂದು ಉತ್ತರಪ್ರದೇಶದ ಕಾಸ್‌ಗಂಜ್‌ ನಲ್ಲಿನ ಮಹಿಳೆಯೋರ್ವರು ಆರೋಪಿಸಿದ್ದಾಗಿ timesofindia ವರದಿ ಮಾಡಿದೆ. ಆರೋಪಿಗಳಲ್ಲಿ ಓರ್ವ ವ್ಯಕ್ತಿ ಬಿಜೆಪಿ ಪಕ್ಷದ ನಾಯಕ ಎಂದು ತಿಳಿದುಬಂದಿದ್ದಾಗಿ ವರದಿ ಉಲ್ಲೇಖಿಸಿದೆ.

ಈ ಇಬ್ಬರು ವ್ಯಕ್ತಿಗಳು ಸುಳ್ಳು ಪ್ರಕರಣ ದಾಖಲಿಸಲು ಹೇಳಿದ್ದರು ಎಂದು ಆರೋಪಿಸುವ ಮುಂಚೆ ಪ್ರಕರಣದಲ್ಲಿ, "ಪ್ರಿನ್ಸ್‌ ಕುರೇಶಿ ಎಂಬ ವ್ಯಕ್ತಿಯು ಮೋನುಗುಪ್ತಾ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ಆತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ" ಎಂದು ಉಲ್ಲೇಖಿಸಲಾಗಿತ್ತು. ಈ ಪ್ರಕರಣದ ಅನ್ವಯ ಕುರೇಶಿ ವಿರುದ್ಧ ಜುಲೈ 16ರಂದು ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. 

ಬಳಿಕ ದೂರು ನೀಡಿದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಕೇಳಿಕೊಂಡಾಗ ಆಕೆ ನಿರಾಕರಿಸಿದ್ದಳು. ಇದೇ ವೇಳೆ ಕುರೇಷಿ ವಿರುದ್ಧದ ಆರೋಪಗಳನ್ನೂ ಅಲ್ಲಗಳೆದಿದ್ದರು. ಆಕೆಯ ಆರೋಪ ಸುಳ್ಳಾದರೆ ಜೈಲು ಪಾಲಾಗುವ ಸಾಧ್ಯತೆ ಇದೆ ಎಂದೂ ಅಧಿಕಾರಿಗಳು ಎಚ್ಚರಿಸಿದ್ದಾಗಿ ವರದಿ ತಿಳಿಸಿದೆ. ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ, 38 ವರ್ಷದ ಅಮನ್ ಚೌಹಾಣ್ ಮತ್ತು 28 ವರ್ಷದ ಆಕಾಶ್ ಸೋಲಂಕಿ ಖುರೇಷಿಯನ್ನು ಬಂಧಿಸುವ ಯತ್ನಕ್ಕೆ ತನ್ನನ್ನು ನೇಮಿಸಿಕೊಂಡಿದ್ದರು ಎಂದು ಮಹಿಳೆ ಹೇಳಿದ್ದಾರೆ. Thetimesofindia.com ಪ್ರಕಾರ ಚೌಹಾಣ್ ಅವರು ಬಿಜೆಪಿ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಎಂದು ಗುರುತಿಸಿಕೊಂಡಿದ್ದಾರೆ. 

ಆದರೆ ಚೌಹಾಣ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆಪಿ ಸಿಂಗ್ ಹೇಳಿದ್ದಾರೆ. ಸೋಲಂಕಿ ಅವರ ಪರಿಚಯವಿಲ್ಲ ಎಂದು ಹೇಳಿದ ಸಿಂಗ್, ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಚೌಹಾಣ್ ಮತ್ತು ಸೋಲಂಕಿ, ಬಲಪಂಥೀಯ ಸಂಘಟನೆಗಳ 200 ಕಾರ್ಯಕರ್ತರೊಂದಿಗೆ ಮಹಿಳೆಯ ಆರೋಪವನ್ನು ಆಧರಿಸಿ "ಲವ್ ಜಿಹಾದ್" ಎಂದು ಆರೋಪಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದರು.

"ತನ್ನ ಆರೋಪಗಳಿಗೆ ಬೆಂಬಲವಾಗಿ ಮಹಿಳೆ ನೀಡಿದ ಎಲ್ಲಾ ವಿವರಗಳು ನಮ್ಮ ತನಿಖೆಯಲ್ಲಿ ʼಸುಳ್ಳುʼ ಎಂದು ಕಂಡುಬಂದಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಬಿಜಿಟಿಎಸ್ ಮೂರ್ತಿ ಹೇಳಿದ್ದಾರೆ. “ಆಕೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಇಷ್ಟವಿರಲಿಲ್ಲ. ನಂತರ ತಪ್ಪೊಪ್ಪಿಕೊಂಡಿದ್ದು, ಇಬ್ಬರು ವ್ಯಕ್ತಿಗಳು ಈ ರೀತಿ ಆರೋಪ ಹೊರಿಸುವಂತೆ ಕೇಳಿಕೊಂಡಿದ್ದರು" ಎಂದು ಹೇಳಿದರು. ಪೊಲೀಸರು ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News