ಮಂಕಿ ಪಾಕ್ಸ್‌ ನಾಲ್ಕನೇ ವರದಿ ಪತ್ತೆ ಹಿನ್ನೆಲೆ: ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ ಕೇಂದ್ರ

Update: 2022-07-24 14:13 GMT
Photo: twitter/bernamadotcom

ಹೊಸದಿಲ್ಲಿ: ಯಾವುದೇ ವಿದೇಶಿ ಪ್ರಯಾಣದ ಇತಿಹಾಸವಿಲ್ಲದ ದಿಲ್ಲಿಯ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ವೈರಸ್‌ ಪಾಸಿಟಿವ್‌ ಕಂಡುಬಂದ ನಂತರ ಕೇಂದ್ರವು ರವಿವಾರ ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು ನಡೆಸಿದೆ. ಇದು ಭಾರತದಲ್ಲಿ ವರದಿಯಾದ ಮಂಕಿಪಾಕ್ಸ್ ರೋಗದ ನಾಲ್ಕನೇ ಪ್ರಕರಣವಾಗಿದೆ.


ಆರೋಗ್ಯ ವಿಜ್ಞಾನಗಳ ಮಹಾನಿರ್ದೇಶನಾಲಯ (DGHS) ನೇತೃತ್ವದಲ್ಲಿ ಸಭೆ ನಡೆದಿದ್ದು, ಆರೋಗ್ಯ ಸಚಿವಾಲಯ, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (NCDC) ಮತ್ತು ICMR ನ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಲೋಕನಾಯಕ ಆಸ್ಪತ್ರೆಯ ನಿಯೋಜಿತ ಪ್ರತ್ಯೇಕ ಕೇಂದ್ರದಲ್ಲಿ ಪ್ರಸ್ತುತ ಚೇತರಿಸಿಕೊಳ್ಳುತ್ತಿರುವ ಹೊಸ ರೋಗಿಯು ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಸ್ಟಾಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.

 ರೋಗದ ಲಕ್ಷಣಗಳನ್ನು ರೋಗಿಯಲ್ಲಿ ಕಂಡು ಹಿಡಿದ ನಂತರ ಸುಮಾರು ಮೂರು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಅವರನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಅವರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಶನಿವಾರ ಕಳುಹಿಸಲಾಗಿದ್ದು, ಪಾಸಿಟಿವ್‌ ವರದಿ ಹೊರಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 
"ಪ್ರಕರಣದ ನಿಕಟ ಸಂಪರ್ಕಗಳನ್ನು ಗುರುತಿಸಲಾಗಿದೆ ಮತ್ತು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಕ್ವಾರಂಟೈನ್‌ನಲ್ಲಿದ್ದಾರೆ" ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕೇರಳದಲ್ಲಿ ಈ ಹಿಂದೆ ಮೂರು ಮಂಕಿ ಪಾಕ್ಸ್‌ ಪ್ರಕರಣಗಳು ವರದಿಯಾಗಿದ್ದವು. ವಿಶ್ವ ಆರೋಗ್ಯ ಸಂಸ್ಥೆ (WHO) ಶನಿವಾರ ಮಂಕಿಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News