×
Ad

16 ವರ್ಷ ಕಳೆದರೂ ಪಂಜಾಬ್ ಕಾರ್ಮಿಕರಿಗೆ ನರೇಗಾ ನಿರುದ್ಯೋಗ ಭತ್ಯೆ ಸಿಕ್ಕಿಲ್ಲ : ರಾಜ್‌ಕುಮಾರ್ ಕನ್ಸುಹಾ

Update: 2022-07-25 08:11 IST
ಸಾಂದರ್ಭಿಕ ಚಿತ್ರ

ಚಂಡೀಗಢ: ದೇಶದಲ್ಲಿ ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂ ನರೇಗಾ) ಜಾರಿಯಾಗಿ ಹದಿನಾರು ವರ್ಷ ಕಳೆದರೂ, ಈ ಸಾಮಾಜಿಕ ಭದ್ರತಾ ಯೋಜನೆಯಡಿ ಪಂಜಾಬ್‍ನಲ್ಲಿ ಒಬ್ಬ ಕಾರ್ಮಿಕನಿಗೂ ನಿರುದ್ಯೋಗ ಭತ್ಯೆ ಸಿಕ್ಕಿಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಇನ್ನೂ ನಿಯಮಾವಳಿಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿಲ್ಲ ಎಂದು ಡೆಮಾಕ್ರಟಿಕ್ ಎಂ ನರೇಗಾ ಫ್ರಂಟ್‍ನ ರಾಜ್ಯ ಘಟಕದ ಅಧ್ಯಕ್ಷ ರಾಜ್‌ಕುಮಾರ್ ಕನ್ಸುಹಾ ತಿಳಿಸಿದ್ದಾರೆ.

ನರೇಗಾ ಕಾಯ್ದೆಯ ಸೆಕ್ಷನ್ 7(1)ರ ಪ್ರಕಾರ, ಕಾರ್ಮಿಕರು ಕೆಲಸಕ್ಕೆ ಮನವಿ ಸಲ್ಲಿಸಿ 15 ದಿನಗಳ ಒಳಗಾಗಿ ಕೆಲಸ ಕೊಡಲು ವಿಫಲವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಂಥ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡಬೇಕಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರಗಳು ಭತ್ಯೆ ಪಾವತಿ ವಿಧಿ ವಿಧಾನಗಳನ್ನು ನಿರ್ದಿಷ್ಟಪಡಿಸುವ ಅಗತ್ಯವಿದೆ. ಇದರ ಜತೆಗೆ ಕಾಯ್ದೆಯ ಸೆಕ್ಷನ್ 7(5)ರ ಪ್ರಕಾರ, ಭತ್ಯೆಗೆ ಅರ್ಹರಾದ 15 ದಿನಗಳ ಒಳಗಾಗಿ ಅಂಥ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ಪಾವತಿಸಬೇಕಾಗುತ್ತದೆ.

"ಕಾಯ್ದೆಯ ನಿಬಂಧನೆಗಳ ಹೊರತಾಗಿಯೂ, ಸರ್ಕಾರ ಭತ್ಯೆಯನ್ನೂ ನೀಡಿಲ್ಲ ಅಥವಾ ಈ ಸಂಬಂಧ ನಿಯಮಾವಳಿಯನ್ನೂ ಬಿಡುಗಡೆ ಮಾಡಿಲ್ಲ. ಕಾಯ್ದೆ ಒದಗಿಸಿದ ಸಾಮಾಜಿಕ ಭದ್ರತೆಯಿಂದ ಬಡವರನ್ನು ವಂಚಿಸುತ್ತಿದೆ ಎಂದು ರಾಜಕುಮಾರ್ ಕನ್ಸುಹಾ ಆಪಾದಿಸಿದ್ದಾರೆ. ಕಾರ್ಮಿಕರಿಗೆ ವಿತರಿಸಿದ ನಿರುದ್ಯೋಗ ಭತ್ಯೆ ಸಂಬಂಧ ಸಂಘಟನೆ ಸಲ್ಲಿಸಿದ ಆರ್‍ಟಿಐ ಅರ್ಜಿಯಿಂದ ಈ ಅಂಶ ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.

ನಿರುದ್ಯೋಗ ಭತ್ಯೆ ನೀಡುವ ಸಂಬಂಧ ಪಂಜಾಬ್ ರಾಜ್ಯ ಸರ್ಕಾರ ನಿಯಮಾವಳಿಗಳನ್ನು ಪ್ರಕಟಿಸಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಎ.5ರಂದು ಲೋಕಸಭೆಗೆ ತಿಳಿಸಿತ್ತು. ಇದುವರೆಗೆ ಕೇವಲ 24 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ಮಾತ್ರ ನಿಯಮಾವಳಿಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದ್ದು, ಪಂಜಾಬ್ ಈ ಪಟ್ಟಿಯಲ್ಲಿ ಸೇರಿಲ್ಲ. ಪಾಟಿಯಾಲಾ ಜಿಲ್ಲೆಯ 8 ಗ್ರಾಮಗಳ ನೂರಾರು ಫಲಾನುಭವಿಗಳು ನಿರುದ್ಯೋಗ ಭತ್ಯೆಗೆ ಅರ್ಹರಾಗಿದ್ದಾರೆ ಎಂದು ರಾಜ್ಯ ಸರ್ಕಾರ ಆರ್‍ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಒಪ್ಪಿಕೊಂಡಿದೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News