×
Ad

ಪಿಡಬ್ಲ್ಯುಡಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯಿಂದ ಬಜ್ಪೆ ಈದ್ಗಾ ಮಸೀದಿಯ ದಫನ ಭೂಮಿಯ ಗುಡ್ಡ ಕುಸಿತ: ಡಿಸಿಗೆ ದೂರು

Update: 2022-07-25 10:28 IST

ಬಜ್ಪೆ, ಜು.25: ಪಿಡಬ್ಲ್ಯುಡಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬಜ್ಪೆ ಈದ್ಗಾ ಮಸೀದಿಯ ದಫನ ಭೂಮಿಯಿರುವ ಗುಡ್ಡ ಕುಸಿಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ರಸ್ತೆ ಅಗಲೀಕರಣದ ಮಾಡುವ ಸಂದರ್ಭ ಮಸೀದಿಗೆ ತಾಗಿಕೊಂಡಿರುವ ಮಸೀದಿಯ ದಫನ ಭೂಮಿಯ ಗುಡ್ಡವನ್ನು 30 ಅಡಿಗಳಷ್ಟು ಅಗೆದು ರಸ್ತೆ ನಿರ್ಮಾಣ ಮಾಡಲಾಗಿತ್ತು. ಆ ಬಳಿಕ 10 ಅಡಿಯಷ್ಟು ಮಾತ್ರ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿದೆ.‌ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ದಫನ ಭೂಮಿ ಇರುವ ಗುಡ್ಡ ಕುಸಿಯುತ್ತಿದ್ದು ದಫನ ಮಾಡಲಾಗಿರುವ ಮೃತದೇಹಗಳು ಬೀದಿಗೆ ಬರುವ ಸಾಧ್ಯತೆ ಇದೆ. ಅಲ್ಲದೆ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೂ ಅಡಚಣೆಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗುಡ್ಡಕ್ಕೆ ಪೂರ್ಣ ಪ್ರಮಾಣದ ತಡೆಗೋಡೆ ನಿರ್ಮಿಸಬೇಕೆಂದು ದೂರಿನಲ್ಲಿ ಆಗ್ರಹಿಸಿರುವ ಅವರು, ಇಲ್ಲವಾದಲ್ಲಿ ಈದ್ಗಾ ಮಸೀದಿ ಮತ್ತು ಮಸೀದಿಗೆ ಸಂಬಂಧಿಸಿದ ದಫನ ಭೂಮಿ ಸಂಪೂರ್ಣ ಕುಸಿದು ಪ್ರಾಣಹಾನಿಯ ಜೊತೆಗೆ ಅಪಾರ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಜ್ಪೆ ಗ್ರಾಪಂ ಮಾಜಿ ಸದಸ್ಯ ಸಿರಾಜ್ ಬಜ್ಪೆ ನೇತೃತ್ವದಲ್ಲಿ ಸಾಮಾಜಿಕ ಕಾರ್ಯಕರ್ತ ನಿಸಾರ್ ಕರಾವಳಿ, ಕರ್ನಾಟಕ ದಲಿತ ಸಂಘ ಸಿದ್ದಾರ್ಥ ನಗರ ಶಾಖೆಯ ಸಂಚಾಲಕ ಸತೀಶ್ ಸಾಲ್ಯಾನ್, ಹಫೀಝ್ ಕೊಳಂಬೆ ಮತ್ತು ಶಾಕೀರ್ ಬಜ್ಪೆಯವರನ್ನು ಒಳಗೊಂಡ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News