ರಾಜ್ಯಸಭೆ ಸೀಟು, ರಾಜ್ಯಾಪಾಲ ಹುದ್ದೆ ನೀಡುವುದಾಗಿ ನಂಬಿಸಿ ಕೋಟ್ಯಾಂತರ ವಂಚನೆ: ನಾಲ್ವರು ಸಿಬಿಐ ವಶಕ್ಕೆ
ಹೊಸದಿಲ್ಲಿ,ಜು.25: 100 ಕೋ.ರೂ.ಗೆ ರಾಜ್ಯಸಭಾ ಸ್ಥಾನ ಮತ್ತು ರಾಷ್ಟ್ರಪತಿ ಹುದ್ದೆಯ ಆಮಿಷವೊಡ್ಡುತ್ತಿದ್ದ ವಂಚಕ ಜಾಲವೊಂದನ್ನು ಸಿಬಿಐ ಭೇದಿಸಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಹಣ ಕೈಬದಲಾಗುವ ಮುನ್ನವೇ ಸಿಬಿಐ ಆರೋಪಿಗಳನ್ನು ಬಂಧಿಸಿದೆ. ಕಳೆದ ಕೆಲವು ವಾರಗಳಿಂದಲೂ ಆರೋಪಿಗಳ ಫೋನ್ ಗಳನ್ನು ಕದ್ದಾಲಿಸುತ್ತಿದ್ದ ಸಿಬಿಐ ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದೆ. ಮಹಾರಾಷ್ಟ್ರದ ಕರ್ಮಳಕರ ಪ್ರೇಮಕುಮಾರ ಬಂಡ್ಗಾರ್,ಕರ್ನಾಟಕದ ರವೀಂದ್ರ ವಿಠಲ ನಾಯ್ಕಾ ಹಾಗೂ ದಿಲ್ಲಿ ನಿವಾಸಿಗಳಾದ ಮಹೇಂದ್ರ ಪಾಲ್ ಅರೋರಾ ಮತ್ತು ಅಭಿಷೇಕ ಬೂರಾ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ರಾಜ್ಯಸಭಾ ಸ್ಥಾನ,ರಾಜ್ಯಪಾಲರ ಹುದ್ದೆ ಅಥವಾ ಸಚಿವಾಲಯಗಳು ಮತ್ತು ಇಲಾಖೆಗಳಡಿ ಸರಕಾರಿ ಸಂಸ್ಥೆಗಳ ಮುಖ್ಯಸ್ಥರ ಹುದ್ದೆಗಳನ್ನು ಕೊಡಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸಲು ವ್ಯಾಪಕ ಜಾಲವೊಂದನ್ನು ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಇಂತಹ ನೇಮಕಗಳಲ್ಲಿ ಪ್ರಮುಖ ಪಾತ್ರವಹಿಸುವ ಉನ್ನತ ಮಟ್ಟದ ಸರಕಾರಿ ಅಧಿಕಾರಿಗಳನ್ನು ತಲುಪಲು ಬೂರಾ ಮತ್ತು ಬಂಡ್ಗಾರ್ ತಮ್ಮ ಸಂಪರ್ಕಗಳನ್ನು ಬಳಸಿಕೊಳ್ಳಲು ಸಂಚು ಹೂಡಿದ್ದರು ಎಂದು ಅವು ಹೇಳಿವೆ.
ಹಿರಿಯ ಸಿಬಿಐ ಅಧಿಕಾರಿಯ ಸೋಗು ಹಾಕುತ್ತಿದ್ದ ಬಂಡ್ಗಾರ್,ತಾನು ಭಾರೀ ಹಣದ ಪ್ರತಿಫಲವನ್ನು ನಿಗದಿಪಡಿಸಬಹುದಾದ ಯಾವುದೇ ಕೆಲಸವನ್ನು ತರುವಂತೆ ಮುಹಮ್ಮದ್ ಐಜಾಝ್ ಖಾನ್ ಸೇರಿದಂತೆ ಇತರ ಆರೋಪಿಗಳಿಗೆ ಸೂಚಿಸುತ್ತಿದ್ದ ಎಂದೂ ಅವು ತಿಳಿಸಿವೆ.
ಬಂಡ್ಗಾರ್,ಅರೋರಾ,ಖಾನ್ ಮತ್ತು ನಾಯ್ಕಾ ಯಾವುದಾದರೂ ಕೆಲಸಕ್ಕಾಗಿ ನೇರವಾಗಿ ಅಥವಾ ಬೂರಾನಂತಹ ಮಧ್ಯವರ್ತಿಗಳ ಮೂಲಕ ತಮ್ಮನ್ನು ಸಂಪರ್ಕಿಸುವ ಆಸಕ್ತರ ಮೇಲೆ ಪ್ರಭಾವವನ್ನು ಬೀರಲು ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಹೆಸರುಗಳನ್ನು ಆಗಾಗ್ಗೆ ಬಳಸುತ್ತಿದ್ದರು ಎಂದು ಸಿಬಿಐನ ಎಫ್ಐಆರ್ನಲ್ಲಿ ಹೇಳಲಾಗಿದೆ.
ಬಂಡ್ಗಾರ್ ಹಿರಿಯ ಸಿಬಿಐ ಅಧಿಕಾರಿಯ ಸೋಗಿನಲ್ಲಿ ತನಗೆ ಪರಿಚಿತರ ಕೆಲಸ ಮಾಡಿಕೊಡುವಂತೆ ಮತ್ತು ತನಿಖೆಯಲ್ಲಿರುವ ಪ್ರಕರಣಗಳ ಮೇಲೆ ಪ್ರಭಾವ ಬೀರಲು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆಯನ್ನು ಒಡ್ಡುತ್ತಿದ್ದ ಎಂದೂ ಆರೋಪಿಸಲಾಗಿದೆ.