ಮಂಕಿಪಾಕ್ಸ್ ಹರಡದಂತೆ ತಡೆಗಟ್ಟಬಹುದು: ವಿಶ್ವ ಆರೋಗ್ಯ ಸಂಸ್ಥೆ

Update: 2022-07-26 15:53 GMT

ಜಿನೆವಾ, ಜು.26: ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ತಡೆಯಲು ಸಾಧ್ಯವಿದೆ ಎಂದು ಮಂಕಿಪಾಕ್ಸ್ಗೆ ಸಂಬಂಧಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಘಟಕದ ತಾಂತ್ರಿಕ ಮುಖ್ಯಸ್ಥ ರೊಸಾಮುಂಡ್ ಲಿವಿಸ್ ಮಂಗಳವಾರ ಹೇಳಿದ್ದಾರೆ. ಸುದ್ಧಿಗಾರರ ಜತೆ ಮಾತನಾಡಿದ ಅವರು ‘ಸರಿಯಾದ ಕಾರ್ಯತಂತ್ರದೊಂದಿಗೆ, ಸರಿಯಾದ ತಂಡದ ಕಾರ್ಯನಿರ್ವಹಣೆಯಿಂದ ಮಂಕಿಪಾಕ್ಸ್ ಸಾಂಕ್ರಾಮಿಕದ ನಿಯಂತ್ರಣ ಸಾಧ್ಯ ಎಂದು ಈಗಲೂ ನಮಗೆ ವಿಶ್ವಾಸವಿದೆ. ಆದರೆ ಸಮಯ ಸರಿಯುತ್ತಿದೆ ಮತ್ತು ಈಗ ನಮ್ಮ ಗರಿಷ್ಟ ಪ್ರಯತ್ನದಿಂದ ಮಾತ್ರ ಇದು ಸಾಧ್ಯವಾಗಬಹುದು’ ಎಂದಿದ್ದಾರೆ.

 ಜಾಗತಿಕ ಸಮನ್ವಯ ಕಾರ್ಯವಿಧಾನವನ್ನು ನಿರ್ಧರಿಸಲು ವಿಶ್ವ ಆರೋಗ್ಯ ಸಂಸ್ಥೆ ಕೆಲಸ ಮಾಡುತ್ತಿದ್ದು ಅದಿನ್ನೂ ಚರ್ಚೆಯ ಹಂತದಲ್ಲಿದೆ ಎಂದವರು ಹೇಳಿದ್ದಾರೆ. ಮಂಕಿಪಾಕ್ಸ್ ಉಲ್ಬಣವನ್ನು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಶನಿವಾರ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ ಘೋಷಿಸಿದ್ದರು. ಗರಿಷ್ಟ ಅಪಾಯದ ಆತಂಕವಿದ್ದಾಗ ‘ಅಂತರಾಷ್ಟ್ರೀಯ ಆತಂಕದ ಸಾರ್ವಜನಿಕ ಆರೋಗ್ಯ ತುರ್ತು’ ಎಂದು ವಿಶ್ವಸಂಸ್ಥೆ ಗುರುತಿಸುತ್ತದೆ ಮತ್ತು ಆಗ ಅದರ ವಿರುದ್ಧ ಸಂಘಟಿತ ಅಂತರಾಷ್ಟ್ರೀಯ ಪ್ರಕ್ರಿಕ್ರಿಯೆ ಅಗತ್ಯವಾಗುತ್ತದೆ.

 ಜತೆಗೆ ಲಸಿಕೆ ಮತ್ತು ಔಷಧಗಳನ್ನು ಹಂಚಿಕೊಳ್ಳಲು ಹಣವನ್ನು ನಿಗದಿ ಮಾಡಬಹುದಾಗಿದೆ. ಮಂಗಗಳಲ್ಲಿ ಮೊದಲು ಗುರುತಿಸಲಾದ ಈ ಸೋಂಕು, ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ವೇಗವಾಗಿ ಹರಡುತ್ತದೆ. ಇದುವರೆಗೆ ಆಫ್ರಿಕಾ ದೇಶಕ್ಕೆ ಮಾತ್ರ ಸೀಮಿತವಾಗಿದ್ದ ಈ ಸಾಂಕ್ರಾಮಿಕ ಈ ವರ್ಷದ ಮೇ ತಿಂಗಳಿನಲ್ಲಿ ಬ್ರಿಟನ್ನಲ್ಲಿ ಪತ್ತೆಯಾದ ಬಳಿಕ ಕ್ರಿಪ್ರವಾಗಿ ವಿಶ್ವದ ಇತರೆಡೆಯೂ ಹರಡಿದೆ. ಇದೀಗ 75ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 16,000ದಷ್ಟು ದೃಢಪಡಿಸಲಾದ ಪ್ರಕರಣ ದಾಖಲಾಗಿದ್ದು 5 ಸಾವು ಸಂಭವಿಸಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಬಹುದು ಎಂದು ಲಿವಿಸ್ ಹೇಳಿದ್ದಾರೆ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News