ಬ್ರಹ್ಮಾವರಕ್ಕೆ ಇನ್ನೂ ಕೋರ್ಟ್ ಮಂಜೂರಾಗಿಲ್ಲ: ಸ್ಪಷ್ಟನೆ
ಉಡುಪಿ, ಜು.26: ಬ್ರಹ್ಮಾವರಕ್ಕೆ ನ್ಯಾಯಾಲಯ ಮಂಜೂರಾಗಿದ್ದು, ಅದು ಆಗಸ್ಟ್ 16ರಂದು ಕಾರ್ಯಾರಂಭ ಮಾಡಲಿದೆ ಎಂದು ಕೆಲವು ಬೇಜವಾಬ್ದಾರಿ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹರಡಿಸುತಿದ್ದು, ಇವೆಲ್ಲವೂ ಸಂಪೂರ್ಣ ಸುಳ್ಳು ಸುದ್ದಿ ಎಂದು ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬ್ರಹ್ಮಾವರದಲ್ಲಿ ಕೋರ್ಟ್‌ನ್ನು ಸ್ಥಾಪಿಸುವ ಕುರಿತಂತೆ ಇಂದಿನವರೆಗೆ ಕರ್ನಾಟಕ ಹೈಕೋರ್ಟ್ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಆದರೆ ಹೈಕೋರ್ಟ್ ಈ ಕುರಿತು ಕೇಳಿದ ಅಭಿಪ್ರಾಯಕ್ಕೆ ಉತ್ತರಿಸಿರುವ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸೆಷ್ಟನ್ ನ್ಯಾಯಾಧೀಶರು ಬ್ರಹ್ಮಾವರದಲ್ಲಿ ಪ್ರಾರಂಭಿಕ ಹಂತದಲ್ಲಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ಕೋರ್ಟ್ ಪ್ರಾರಂಭಿಸಲು ಹಾಗೂ ಮುಂದೆ ಉಡುಪಿಯ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಕೋರ್ಟ್ ವಾರದ ಎರಡು ದಿನ (ಸೋಮವಾರ, ಮಂಗಳವಾರ) ಕಾರ್ಯಾಚರಿಸಲು ತಮ್ಮ ಪ್ರಸ್ತಾಪ ಕಳುಹಿಸಿದ್ದರು.
ಸದ್ಯಕ್ಕೆ ಬ್ರಹ್ಮಾವರದ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಕೋರ್ಟ್ ಪ್ರಾರಂಭಿಸುವಂತೆ ಪ್ರಸ್ತಾಪದಲ್ಲಿ ತಿಳಿಸಲಾಗಿದೆ. ಆದರೆ ಆ ಕಟ್ಟಡವನ್ನು ಕೋರ್ಟ್ ಅಗತ್ಯಕ್ಕೆ ತಕ್ಕಂತೆ ನವೀಕರಿಸುವಂತೆ ಸೂಚಿಸಲಾಗಿದೆ. ಈ ಪ್ರಸ್ತಾಪ ಇನ್ನೂ ಪ್ರಾರಂಭಿಕ ಹಂತದಲಿದ್ದು, ಕೋರ್ಟ್‌ನ ವ್ಯಾಪ್ತಿ, ವಿಸ್ತಾರವೂ ಸೇರಿದಂತೆ ಬೇರೆ ಬೇರೆ ವ್ಯವಸ್ಥೆ ಪೂರ್ಣಗೊಳ್ಳಲು ಇನ್ನೂ ಮೂರು-ನಾಲ್ಕು ತಿಂಗಳ ಬೇಕಾಗುತ್ತದೆ ಎಂದು ಸ್ಪಷ್ಟೀಕರಣದಲ್ಲಿ ತಿಳಿಸಲಾಗಿದೆ.
ಬ್ರಹ್ಮಾವರದಲ್ಲಿ ಕೋರ್ಟ್ ಸ್ಥಾಪನೆಯ ಕುರಿತಂತೆ ವಕೀಲರಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಈ ಸ್ಪಷ್ಟೀಕರಣ ನೀಡಲಾಗಿದೆ ಎಂದು ರೋನಾಲ್ಡ್ ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.