ಉಷ್ಣಅಲೆಗೆ ನಾಮಕರಣ ಮಾಡಿದ ಸ್ಪೇನ್ ನ ನಗರ

Update: 2022-07-26 17:20 GMT

ಮ್ಯಾಡ್ರಿಡ್, ಜು.26: ಉಷ್ಣವಲಯದ ಬಿರುಗಾಳಿ ಮತ್ತು ಚಂಡಮಾರುತಕ್ಕೆ ನಾಮಕರಣ ಮಾಡುವ ರೀತಿಯಲ್ಲಿಯೇ ಸ್ಪೇನ್‌ನ ನಗರ ಸೆವಿಲ್ಲೆಯು ಉಷ್ಣಅಲೆಗೆ ಹೆಸರು ಇಡುವ ಮೂಲಕ ಈ ರೀತಿ ಮಾಡಿದ ವಿಶ್ವದ ಪ್ರಥಮ ನಗರ ಎನಿಸಿಕೊಂಡಿದೆ. ಸೆವಿಲ್ಲೆ ನಗರವನ್ನು ಅಪ್ಪಳಿಸಿದ ಈ ವರ್ಷದ 4ನೇ ಉಷ್ಣಅಲೆಗೆ ಝೋ ಎಂದು ಹೆಸರಿಡಲಾಗಿದೆ ಎಂದು ನಗರದ ಆಡಳಿತ ವರದಿ ಮಾಡಿದೆ.

ತೀವ್ರ ಉಷ್ಣಅಲೆಯಿಂದ ವಿಪರೀತ ಶಾಖದ ಅವಧಿ ಹೆಚ್ಚಾಗಿರುವುದರಿಂದ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಉಷ್ಣಅಲೆಗೆ ಹೆಸರಿಡಲು ನಿರ್ಧರಿಸಲಾಗಿದೆ. ನಗರದ ಹವಾಮಾನ ದತ್ತಾಂಶ ವ್ಯವಸ್ಥೆ 4ನೇ ಉಷ್ಣಅಲೆಗೆ ಝೋ ಎಂದು ಹೆಸರಿಟ್ಟಿದೆ. ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ತೀವ್ರತರವಾದ ತಾಪಮಾನದ ಮೇಲೆ ತೇವಾಂಶ ಮತ್ತು ದಿನದ ಸಮಯದ ಪ್ರಭಾವವನ್ನು ಅರ್ಥ ಮಾಡಿಕೊಳ್ಳಲು ಉಷ್ಣಅಲೆಗೆ ಹೊಸ ವರ್ಗೀಕರಣ ವ್ಯವಸ್ಥೆಯನ್ನು ಕಳೆದ ತಿಂಗಳು ಪ್ರಾರಂಭಿಸಲಾಗಿದೆ.

ಝೋ ಉಷ್ಣಅಲೆಯ ಸಂದರ್ಭ ಹಗಲಿನ ತಾಪಮಾನ 43 ಡಿಗ್ರಿ ಸೆಲ್ಶಿಯಸ್ಗೂ ಹೆಚ್ಚಿರುತ್ತದೆ. ಮುಂದಿನ ದಿನಗಳಲ್ಲಿ ಬೀಸಲಿರುವ ಉಷ್ಣಅಲೆಗಳಿಗೆ ಯಾಗೊ, ಕ್ಸೆನಿಯಾ, ವೆನ್ಸೆಸ್ಲಾವೊ ಮತ್ತು ವೆಗಾ ಎಂದು ಹೆಸರಿಡಲಾಗುವುದು. ಝೋ ಉಷ್ಣಮಾರುತದ ಸಂದರ್ಭ ಆದಷ್ಟು ಶ್ರಮದ ಕೆಲಸವನ್ನು ತಪ್ಪಿಸಬೇಕು ಮತ್ತು ಹೆಚ್ಚು ನೀರನ್ನು ಕುಡಿಯಬೇಕು. ಈ ಅವಧಿಯಲ್ಲಿ ತಾಪಮಾನ ಅತ್ಯಂತ ಗರಿಷ್ಟಮಟ್ಟಕ್ಕೆ ತಲುಪಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸ್ಥಳೀಯ ಹವಾಮಾನ ಇಲಾಖೆ ಮತ್ತು ವಾಷಿಂಗ್ಟನ್ನ ಆರ್ಷ್-ರಾಕ್ ಪ್ರತಿಷ್ಟಾನ ಜಂಟಿಯಾಗಿ ಹಮ್ಮಿಕೊಂಡಿರುವ ವರ್ಷಾವಧಿಯ ಯೋಜನೆಯಡಿ ಈ ವರ್ಗೀಕರಣ ಮಾಡಲಾಗಿದೆ. ಯೋಜನೆಯಡಿಯಲ್ಲಿ ಹವಾಮಾನ ಶಾಸ್ತ್ರಜ್ಞರು ಸೆವಿಲ್ಲೆ ನಗರದ ಐತಿಹಾಸಿಕ ಹವಾಮಾನ ದಾಖಲೆ ಮತ್ತು ಸ್ಥಳೀಯ ಆರೋಗ್ಯ ಮತ್ತು ಮರಣದ ಡೇಟಾವನ್ನು ವಿಶ್ಲೇಷಿಸುತ್ತಾರೆ. ಪ್ರತಿಕೂಲ ಘಟನೆಯ ಐದು ದಿನಗಳ ಮುಂಚಿತವಾಗಿ ಶಾಖದ ಅಲೆಗಳ ಮುನ್ಸೂಚನೆ ನೀಡುತ್ತಾರೆ ಮತ್ತು ಅದರ ಪ್ರಭಾವದ ಆಧಾರದಲ್ಲಿ ಅದನ್ನು ಸ್ವಯಂ ಚಾಲಿತವಾಗಿ ವರ್ಗಾಯಿಸುತ್ತಾರೆ.

 ಹವಾಮಾನ ವೈಪರೀತ್ಯದಿಂದ ಸಂಭವಿಸುವ ಉಷ್ಣಮಾರುತದಿಂದ ಸ್ಪೇನ್ನಲ್ಲಿ 600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News