×
Ad

ವಿಶ್ವಸಂಸ್ಥೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರ: ಇಬ್ಬರು ಭಾರತೀಯ ಶಾಂತಿಪಾಲಕರು ಮೃತ್ಯು

Update: 2022-07-27 07:46 IST

ಹೊಸದಿಲ್ಲಿ: ಭಾರತೀಯ ಗಡಿಭದ್ರತಾ ಪಡೆಯ ಇಬ್ಬರು ಯೋಧರು ಸೇರಿದಂತೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೂವರು, ಬ್ಯುಟೆಂಬೊದ ಪೂರ್ವ ಡಿಆರ್ ಕಾಂಗೊ ಪಟ್ಟಣದಲ್ಲಿ ನಡೆದ ವಿಶ್ವಸಂಸ್ಥೆ ವಿರೋಧಿ ಪ್ರತಿಭಟನೆ ವೇಳೆ ಮೃತಪಟ್ಟಿದ್ದಾರೆ.

ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಏಳು ಮಂದಿ ಪ್ರತಿಭಟನಾಕಾರರೂ ಹತರಾಗಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಪಾಲ್ ನೊಮಾ ಪ್ರಕಟಿಸಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ, ಸಶಸ್ತ್ರ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಆಪಾದಿಸಿ ಸೋಮವಾರ ಈ ಪ್ರಕ್ಷುಬ್ಧ ಪ್ರದೇಶದಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದವು.

"ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿದ್ದ ಇಬ್ಬರು ಭಾರತೀಯ ಯೋಧರ ಸಾವಿನಿಂದ ತೀವ್ರ ದುಃಖವಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಡಾ.ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಕಾಂಗೊದಲ್ಲಿ ವಿಶ್ವಸಂಸ್ಥೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನ ತಲುಪಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಸೋಮವಾರ ಉದ್ರಿಕ್ತ ಪ್ರತಿಭಟನಾಕಾರರು ಗೋಮಾದಲ್ಲಿರುವ ಯುಎನ್ ಮಿಷನ್ ಕಚೇರಿಗೆ ಬೆಂಕಿ ಹಚ್ಚಿದ್ದರು. ಪೂರ್ವ ಕಾಂಗೊದಲ್ಲಿ ಶಾಂತಿಪಾಲನಾ ಪಡೆ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎನ್ನುವುದು ಪ್ರತಿಭಟನಾಕಾರರ ಅರೋಪ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News