ಕಾತ್ಯಾಯಿನಿ ಕುಂಜಿಬೆಟ್ಟು, ಮೌಲ್ಯ ಸ್ವಾಮಿಗೆ ‘ದೇಸಾಯಿ ಕಾವ್ಯ ಪುರಸ್ಕಾರ’
ಉಡುಪಿ : ಜನಸೇವಕ, ಕವಿ ಡಾ. ದಿನಕರ ದೇಸಾಯಿ ಅವರ ಹೆಸರಿನಲ್ಲಿ ಅಂಕೋಲೆಯ ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನವು ಕಳೆದ ನಲವತ್ತೊಂದು ವರ್ಷಗಳಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಕೊಡಮಾಡುವ ರಾಷ್ಟ್ರಮಟ್ಟದ ‘ದಿನಕರ ದೇಸಾಯಿ ಕಾವ್ಯ ಪುರಸ್ಕಾರ’ವನ್ನು ಈ ವರ್ಷ ಉಡುಪಿಯ ಡಾ. ಕಾತ್ಯಾಯಿಣಿ ಕುಂಜಿಬೆಟ್ಟು ಅವರ ‘ಅವನು ಹೆಣ್ಣಾಗಬೇಕು’ ಹಾಗೂ ಮೈಸೂರಿನ ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಕೃತಿಗಳಿಗೆ ಜಂಟಿಯಾಗಿ ಘೋಷಿಸಲಾಗಿದೆ.
ಡಾ.ದಿನಕರ ದೇಸಾಯಿ ಕಾವ್ಯ ಪುರಸ್ಕಾರ’ಗಳನ್ನು 22 ಮಂದಿಗೆ ನೀಡಲಾಗಿದೆ. ಈ ವರ್ಷ ಒಟ್ಟೂ ಐವತ್ತು ಕೃತಿಗಳು ಸ್ಫರ್ಧಾ ಕಣದಲ್ಲಿದ್ದು, ಅಂತಿಮ ಸುತ್ತಿಗೆ ಉತ್ತಮ ಸಂವೇದನೆಯ ಕಾವ್ಯಗಳಿರುವ ಐದು ಕೃತಿಗಳನ್ನು ಆಯ್ದುಕೊಳ್ಳಲಾಗಿತ್ತು. ಅಂತಿಮ ಸುತ್ತಿನಲ್ಲಿದ್ದ ಐದೂ ಕೃತಿಗಳು ಮಹಿಳಾ ಲೇಖಕರದ್ದಾಗಿದ್ದುದು ಈ ವರ್ಷದ ವಿಶೇಷವಾಗಿತ್ತು.
ಮೈಸೂರಿನ ಡಾ. ಜಿ.ಪಿ.ಬಸವರಾಜು, ಸುಬ್ರಾಯ ಮತ್ತಿಹಳ್ಳಿ ಸಿದ್ಧಾಪುರ ಹಾಗೂ ಡಾ.ವಿನಯಾ ಒಕ್ಕುಂದ ಧಾರವಾಡ ಇವರನ್ನೊಳಗೊಂಡ ನಿರ್ಣಾಯಕ ಮಂಡಳಿಯ ತೀರ್ಮಾನದಂತೆ ಪ್ರಶಸ್ತಿಗೆ ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಮೌಲ್ಯ ಸ್ವಾಮಿ ಅವರ ಕೃತಿಗಳನ್ನು ಜಂಟಿಯಾಗಿ ಆಯ್ಕೆ ಮಾಡಲಾಯಿತು. ಕಾವ್ಯ ಪುರಸ್ಕಾರ ಪ್ರಶಸ್ತಿ ಫಲಕ ಹಾಗೂ 25 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ. ಬಹುಮಾನ ಮೊತ್ತವನ್ನು ಇಬ್ಬರಿಗೂ ಸಮಾನವಾಗಿ ಹಂಚಿಕೆ ಮಾಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ ತಿಂಗಳಲ್ಲಿ ಅಂಕೋಲೆಯಲ್ಲಿ ಜರಗಲಿದೆ ಎಂದು ಪ್ರತಿಷ್ಠಾನದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡದ ಪ್ರಮುಖ ಕವಯಿತ್ರಿಯರಲ್ಲಿ ಒಬ್ಬರಾಗಿ ಗುರುತಿಸಲ್ಪಡುವ ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಕಾಪು ಬಳಿಯ ಕರಂದಾಡಿಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕಿ ಯಾಗಿದ್ದಾರೆ. ಇವರ ತುಳು ಕಾದಂಬರಿ ‘ಕಬರ್ಗತ್ತಲೆ’ಗೆ ತುಳುಕೂಟ ಉಡುಪಿಯ ‘ಪಣಿಯಾಡಿ ಪ್ರಶಸ್ತಿ’ ಪಡೆದಿದ್ದರೆ, ಕನ್ನಡದ ಹಲವು ಕಾದಂಬರಿ, ಕವನ ಸಂಕಲನ, ನಾಟಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಜಯಿಸಿವೆ.
ಲೇಖಕಿ ಮೌಲ್ಯ ಸ್ವಾಮಿ ಮೂಲತಃ ಮೈಸೂರಿನವರು. ಕನ್ನಡ ಕಾವ್ಯ ಪರಂಪರೆಗೆ ತೆರೆದುಕೊಳ್ಳುತ್ತಿರುವ ಹೊಸ ಧ್ವನಿ ಇವರಾಗಿದ್ದಾರೆ. ಮೌಲ್ಯ ಸ್ವಾಮಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರಿಗೆ ೨೦೧೫ನೇ ಸಾಲಿನ ಟೊಟೊ ಪುರಸ್ಕಾರ ಲಭಿಸಿದೆ. ರಂಗಭೂಮಿಯಲ್ಲೂ ಗುರುತಿಸಿಕೊಂಡಿರುವ ಮೌಲ್ಯಸ್ವಾಮಿ, ಹಲವು ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಮೌಲ್ಯಸ್ವಾಮಿ ಅವರ ಚೊಚ್ಚಲ ಕವನ ಸಂಕಲನ.