ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ: ಕೊರಗರ ಅಹೋರಾತ್ರಿ ಧರಣಿ ನಾಲ್ಕನೇ ದಿನವೂ ಮುಂದುವರಿಕೆ
ಉಡುಪಿ, ಡಿ.18: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಕಲ್ಪಿಸು ವಂತೆ ಆಗ್ರಹಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನವಾದ ಗುರುವಾರವೂ ಮುಂದುವರೆದಿದೆ.
ಧರಣಿಗೆ ಬೆಂಬಲವಾಗಿ ಕರ್ನಾಟಕ ದಲಿತ ಸಂಷರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗದ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಪಾಲ್ಗೊಂಡರು.
ಅರಣ್ಯ ಬುಡಕಟ್ಟು ಸಮುದಾಯಗಳ ಅರ್ಹ ವಿದ್ಯಾವಂತ ನಿರುದ್ಯೋಗಿ ಗಳನ್ನು ಕರ್ನಾಟಕ ಸರಕಾರದ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡಿ ಉದ್ಯೋಗ ಭದ್ರತೆ ಒದಗಿಸುವ ಆದೇಶ ಹೊರಡಿಸುವವರೆಗೂ ಈ ಹೋರಾಟ ಮುಂದುವರೆಸಲಾಗುವುದೆಂದು ಧರಣಿನಿರತರು ತಿಳಿಸಿದ್ದಾರೆ.
ಧರಣಿಯಲ್ಲಿ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಂಯೋಜಕ ಕೆ.ಪುತ್ರನ್ ಹೆಬ್ರಿ, ಮುಖಂಡರಾದ ಶೇಖರ್ ಕೆಂಜೂರು, ಭಾರತಿ, ಪ್ರವೀಣ ಹೆಬ್ರಿ, ಶೇಖರ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.