×
Ad

ಹತ್ರಸ್ ಸಂತ್ರಸ್ತೆಯ ಕುಟುಂಬದ ಓರ್ವ ಸದಸ್ಯರಿಗೆ ಉದ್ಯೋಗ ನೀಡಿ: ಉ.ಪ್ರ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚನೆ

Update: 2022-07-28 14:39 IST

ಅಲಹಾಬಾದ್,ಜು.28: ಹಥರಾಸ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ 19ರ ಹರೆಯದ ಯುವತಿಯ ಕುಟುಂಬದ ಓರ್ವ ಸದಸ್ಯರಿಗೆ ಉದ್ಯೋಗ ನೀಡುವುದನ್ನು ಪರಿಗಣಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಬುಧವಾರ ಉ.ಪ್ರದೇಶ ಸರಕಾರಕ್ಕೆ ನಿರ್ದೇಶ ನೀಡಿದೆ.

ಉದ್ಯೋಗವನ್ನು ಒದಗಿಸಲು ರಾಜ್ಯ ಸರಕಾರವು ಒಪ್ಪಿಕೊಂಡ ಬಳಿಕ ನ್ಯಾಯಮೂರ್ತಿಗಳಾದ ರಂಜನ್ ರಾಯ್ ಮತ್ತು ಜಸಪ್ರೀತ್ ಸಿಂಗ್ ಅವರ ಪೀಠವು,ಮೂರು ತಿಂಗಳೊಳಗೆ ಉದ್ಯೋಗವನ್ನು ನೀಡಬೇಕು ಎಂದು ಸ್ಪಷ್ಟಪಡಿಸಿತು. ಪೀಠವು ಗೌರವಯುತ ಅಂತ್ಯಸಂಸ್ಕಾರದ ಹಕ್ಕಿನ ಕುರಿತು ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಅಧಿಕಾರಿಗಳು ತಮ್ಮ ಅನುಪಸ್ಥಿತಿಯಲ್ಲಿ ಆಕೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು ಎಂದು ಯುವತಿಯ ಕುಟುಂಬ ಸದಸ್ಯರು ಆರೋಪಿಸಿದ ಬಳಿಕ ನ್ಯಾಯಾಲಯವು ಈ ವಿಷಯವನ್ನು ತನ್ನ ಗಮನಕ್ಕೆ ತೆಗೆದುಕೊಂಡಿತ್ತು.

ಸ್ಪಷ್ಟವಾಗಿ ಯುವತಿಯ ಕುಟುಂಬಕ್ಕೆ ಉದ್ಯೋಗದ ಅಗತ್ಯವಿತ್ತು ಮತ್ತು ಇದೇ ಕಾರಣದಿಂದ ಕುಟುಂಬದ ಓರ್ವ ಸದಸ್ಯರನ್ನು ರಾಜ್ಯ ಸರಕಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಿಕೊಳ್ಳುವುದಾಗಿ ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು 2020,ಸೆ.30ರಂದು ನೀಡಿದ್ದ ಭರವಸೆಯನ್ನು ಅಧಿಕಾರಿಗಳು ಈಡೇರಿಸಬೇಕು ಎಂದು ನ್ಯಾಯಾಲಯವು ಹೇಳಿತು.

ವಿಚಾರಣೆ ಸಂದರ್ಭ ಉ.ಪ್ರ.ಸರಕಾರದ ಪರ ವಕೀಲರು ಆರಂಭದಲ್ಲಿ,ಆಡಳಿತವು ಯುವತಿಯ ಕುಟುಂಬದ ಓರ್ವ ಸದಸ್ಯರಿಗೆ ಖಾಸಗಿ ಉದ್ಯೋಗವನ್ನು ವ್ಯವಸ್ಥೆ ಮಾಡಬಹುದು ಎಂದು ತಿಳಿಸಿದ್ದರು. ರಾಜ್ಯವು ಹಾಗೆ ಮಾಡಲು ಹೇಗೆ ಸಾಧ್ಯ ಎಂದು ಪೀಠವು ಪ್ರಶ್ನಿಸಿದಾಗ, ಸರಕಾರವು ಉದ್ಯೋಗವನ್ನು ನೀಡಲು ಸಿದ್ಧವಿದೆ ಎಂದು ವಕೀಲರು ತಿಳಿಸಿದರು.

ಮುಂದಿನ ಆರು ತಿಂಗಳೊಳಗೆ ಯುವತಿಯ ಕುಟುಂಬಕ್ಕೆ ಹತ್ರಸ್‌ ನಿಂದ ಹೊರಗೆ ಪುನರ್ವಸತಿ ಕಲ್ಪಿಸುವಂತೆಯೂ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿತು. ಘಟನೆಯ ಬಳಿಕ ಸ್ವಗ್ರಾಮದಲ್ಲಿ ಸಹಜ ಬದುಕು ನಡೆಸುವುದು ಕುಟುಂಬಕ್ಕೆ ಕಠಿಣವಾಗುತ್ತದೆ ಎಂದು ಅದು ಬೆಟ್ಟು ಮಾಡಿತು. ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ಹಾಗೂ ಕಟುಂಬದಲ್ಲಿಯ ಮಕ್ಕಳ ಶಿಕ್ಷಣ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪುನರ್ವಸತಿ ಕಾರ್ಯ ನಡೆಯಬೇಕು ಎಂದೂ ಪೀಠವು ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News