ಮೊದಲ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕಿಂತ ಎರಡು ಪಟ್ಟು ಅಧಿಕ ನಿವ್ವಳ ಲಾಭ ದಾಖಲಿಸಿದ ಮಾರುತಿ ಸುಝುಕಿ
ಹೊಸದಿಲ್ಲಿ: ಜೂನ್ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಮಾರುತಿ ಸುಝುಕಿ ಇಂಡಿಯಾ ಇದರ ನಿವ್ವಳ ಲಾಭ ದ್ವಿಗುಣಗೊಂಡು ರೂ 1,036 ಕೋಟಿಗೆ ಏರಿಕೆಯಾಗಿದೆ ಎಂದು ಕಂಪೆನಿ ಬುಧವಾರ ಮಾಹಿತಿ ನೀಡಿದೆ. ಕಳೆದ ವರ್ಷ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪೆನಿಯ ನಿವ್ವಳ ಲಾಭ ರೂ. 475 ಕೋಟಿಯಷ್ಟಾಗಿತ್ತು.
ಜೂನ್ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಂಪೆನಿಯ ನಿವ್ವಳ ಮಾರಾಟ ಕಳೆದ ವರ್ಷದ ರೂ 17,776 ಕೋಟಿಗೆ ಹೋಲಿಸಿದಾಗ ರೂ 26,512 ಕೋಟಿಗೆ ಏರಿಕೆಯಾಗಿದೆ.
ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಮಾರಾಟ ಇಳಿಕೆಯಾಗಿತ್ತು ಎಂದು ಕಂಪೆನಿ ಹೇಳಿದೆ. ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪೆನಿ 4,67,931 ವಾಹನಗಳನ್ನು ಮಾರಾಟ ಮಾಡಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 3,53,614 ವಾಹನಗಳನ್ನು ಮಾರಾಟ ಮಾಡಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಈ ವರ್ಷ 3,98,494 ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ 69,437 ವಾಹನಗಳನ್ನು ರಫ್ತುಗೊಳಿಸಲಾಗಿದ್ದು ಇದು ಯಾವುದೇ ತ್ರೈಮಾಸಿಕದಲ್ಲಿ ಗರಿಷ್ಠ ಸಂಖ್ಯೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು 3,08,095 ವಾಹನಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ 45,519 ವಾಹನಗಳನ್ನು ರಫ್ತುಗೊಳಿಸಿತ್ತು.