ಪಶ್ಚಿಮ ಬಂಗಾಳ ಕ್ಯಾಬಿನೆಟ್‌ನಿಂದ ಪಾರ್ಥ ಚಟರ್ಜಿ ಅಮಾನತು
ಕೋಲ್ಕತಾ,ಜು.28: ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿಸಲ್ಪಟ್ಟಿರುವ ಪ.ಬಂಗಾಳದ ಕೈಗಾರಿಕಾ ಸಚಿವ ಪಾರ್ಥಾ ಚಟರ್ಜಿಯವನ್ನು ಗುರುವಾರ ರಾಜ್ಯ ಸಂಪುಟದಿಂದ ವಜಾ ಮಾಡಲಾಗಿದೆ.
ಚಟರ್ಜಿಯವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ (ಈ.ಡಿ.)ದ ಪ್ರಕಾರ ಅವರ ನಿಕಟ ಸಹವರ್ತಿ ಅರ್ಪಿತಾ ಮುಖರ್ಜಿಯವರಿಗೆ ಸಂಬಂಧಿಸಿದ ಅಪಾರ್ಟ್ಮೆಂಟ್ಗಳಿಂದ 50 ಕೋ.ರೂ.ನಗದು,ಕೆಜಿಗಟ್ಟಲೆ ಚಿನ್ನ,ಆಸ್ತಿಗಳ ದಾಖಲೆಗಳು ಮತ್ತು ವಿದೇಶಿ ವಿನಿಮಯವನ್ನು ವಶಪಡಿಸಿಕೊಳ್ಳಲಾಗಿದೆ.
ಚಟರ್ಜಿ ರಾಜ್ಯ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ,ಸಂಸದೀಯ ವ್ಯವಹಾರಗಳು,ವಿದ್ಯುನ್ಮಾನ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ,ಸಾರ್ವಜನಿಕ ಉದ್ಯಮಗಳು ಮತ್ತು ಕೈಗಾರಿಕೆ ಪುನರ್ನಿರ್ಮಾಣ ಖಾತೆಗಳನ್ನು ಹೊಂದಿದ್ದರು.
ಟಿಎಂಸಿಯ ಮಹಾ ಕಾರ್ಯದರ್ಶಿಯೂ ಆಗಿರುವ ಚಟರ್ಜಿಯವರನ್ನು ಶನಿವಾರ ಬಂಧಿಸಲಾಗಿತ್ತು.
ಕಲಕತ್ತಾ ಉಚ್ಚ ನ್ಯಾಯಾಲಯದ ನಿರ್ದೇಶದಂತೆ ಸಿಬಿಐ ಪ.ಬಂಗಾಳ ಶಾಲಾ ಸೇವಾ ಆಯೋಗದ ಶಿಫಾರಸುಗಳ ಮೇರೆಗೆ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಗ್ರೂಪ್ ಸಿ ಮತ್ತು ಡಿ ಸಿಬ್ಬಂದಿ ಹಾಗೂ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಗಳಲ್ಲಿ ಅಕ್ರಮಗಳ ಆರೋಪದ ತನಿಖೆಯನ್ನು ನಡೆಸುತ್ತಿದ್ದರೆ,ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಗಳ ಕುರಿತು ಈ.ಡಿ.ತನಿಖೆಯನ್ನು ನಡೆಸುತ್ತಿದೆ.