ಕೊಚ್ಚಿ: ಜೀವನದ ಮೊಟ್ಟ ಮೊದಲ ವಿಮಾನ ಪ್ರಯಾಣವನ್ನು ಆಸ್ವಾದಿಸಿದ 27 ಹಿರಿಯ ಮಹಿಳೆಯರು

Update: 2022-07-28 13:59 GMT
Photo: Newindianexpress.com

ಕೊಚ್ಚಿ: ಕೊಚ್ಚಿ ಕಾರ್ಪೊರೇಷನ್ ಮತ್ತು ಹೆಲ್ಪೇಜ್ ಇಂಡಿಯಾ ಸಹಯೋಗದೊಂದಿಗೆ 27 ಹಿರಿಯ ಮಹಿಳೆಯರು ತಮ್ಮ ಜೀವಮಾನದಲ್ಲಿಯೇ ಮೊದಲ ಬಾರಿಗೆ ವಿಮಾನವೊಂದರಲ್ಲಿ ಪ್ರಯಾಣಿಸುವ ಅವಕಾಶ ಪಡೆದರು.

ಕೊಚ್ಚಿ ನಗರಸಭೆಯ ಚುಲ್ಲಿಕ್ಕಲ್ ವಿಭಾಗದ ಈ 27 ಹಿರಿಯ ನಾಗರಿಕರು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನೇರಿ ಕಣ್ಣೂರಿನಲ್ಲಿಳಿದರು.

ಈ 27 ಮಂದಿಯ ಪೈಕಿ ಒಬ್ಬಾಕೆ ವಿಮಾನದಲ್ಲಿ ಪ್ರಯಾಣಿಸುವ ಆಸೆ ವ್ಯಕ್ತಪಡಿಸಿದ್ದರು. ಅವರ ಆಸೆಯನ್ನು ಈಡೇರಿಸಲು ಆಕೆಯಂತೆಯೇ ಇನ್ನೂ 26 ಮಂದಿಯನ್ನು ಆರಿಸಿ ಒಂದೇ ತಿಂಗಳಲ್ಲಿ ಮೇಯರ್  ಹಾಗೂ ಹೆಲ್ಪೇಜ್ ಇಂಡಿಯಾ ಸಹಕಾರದೊಂದಿಗೆ ಈ ಪ್ರಯಾಣದ ಏರ್ಪಾಟು ಮಾಡಲಾಯಿತು ಎಂದು ಸ್ಥಳೀಯ ಕೌನ್ಸಿಲರ್ ಬಸ್ತೀನ್ ಬಾಬು ಹೇಳಿದ್ದಾರೆ.

ವಯೋಜನ ಸೇವನಾ ಕೇಂದ್ರದಲ್ಲಿ ಈ ಕಾರ್ಯಕ್ರಮವನ್ನು ಮೇಯರ್ ಎಂ ಅನಿಲ್ ಕುಮಾರ್ ಉದ್ಘಾಟಿಸಿದರು. ಈ ವಿಮಾನಯಾನದಲ್ಲಿ ಪಾಲ್ಗೊಂಡ 27 ಮಹಿಳೆಯರಲ್ಲಿ 88 ವರ್ಷದ ಮೋನಿಕಾ ಸ್ಟೇನ್ಲಿ ಅತ್ಯಂತ ಹಿರಿಯರಾಗಿದ್ದರು. ಸಾಂಪ್ರದಾಯಿಕ ಕ್ರೈಸ್ತ ಉಡುಗೆಯಾದ ಚಟ್ಟಯುಮ್ ಮುಂಡುಂ ಧರಿಸಿದ್ದ ಆಕೆ ಕೈಯ್ಯಲ್ಲಿ ಹ್ಯಾಂಡ್ ಬ್ಯಾಗ್ ಹಿಡಿದುಕೊಂಡಿದ್ದರು. ಎಲ್ಲಾ ಮಹಿಳೆಯರೂ ಶಾಲಾ ಮಕ್ಕಳಂತೆ ಅತ್ಯುತ್ಸಾಹದಿಂದ ಈ ಪ್ರಯಾಣಕ್ಕೆ ಸಿದ್ಧಗೊಂಡಿದ್ದರು.

ಇಂದು ಪರಸ್ಸಿನಕಡವು ಸ್ನೇಕ್ ಪಾರ್ಕ್, ಮುತ್ತಪ್ಪನ್ ದೇವಸ್ಥಾನ, ಮುಝಪ್ಪಿಲಂಗಡ್ ಬೀಚಿಗೆ ಭೇಟಿ ನೀಡಿದ ತಂಡ ವಾಪಸ್ ಕೊಚ್ಚಿಗೆ ರೈಲಿನಲ್ಲಿ ಪ್ರಯಾಣಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News