ರಾಯಭಾರಿ ಕಚೇರಿಗಳ ಕೇಸರೀಕರಣ

Update: 2022-07-29 07:04 GMT

ವಿದೇಶಾಂಗ ಸೇವಾ ನೇಮಕಾತಿಗಳಲ್ಲಿ ಆಂಗ್ಲಭಾಷೆ ಮಾತನಾಡುವ ವರ್ಗದ ಜಾಗದಲ್ಲಿ ಹಿಂದಿ ಪರ ಹಾಗೂ ಹಿಂದುತ್ವ ಪರ ಧೋರಣೆಯುಳ್ಳವರನ್ನು ಕುಳ್ಳಿರಿಸುವ ಕೇಂದ್ರ ಸರಕಾರದ ಅಭಿಯಾನವು ಭಾರತದ ರಾಜತಾಂತ್ರಿಕತೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಲಿತೆಗೆದುಕೊಳ್ಳುತ್ತಿದೆ.

 2017ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಜೆಪಿಯ ಆದರ್ಶ ನಾಯಕ ದಿವಂಗತ ದೀನದಯಾಳ್ ಉಪಾಧ್ಯಾಯ ಕುರಿತಾದ ಇಂಟಿಗ್ರಲ್ ಹ್ಯೂಮನಿಸಂ (ಸಮಗ್ರ ಮಾವೀಯತಾವಾದ) ಎಂಬ ಅಧಿಕೃತ ಕೃತಿಯನ್ನು ಬಿಡುಗಡೆಗೊಳಿಸಿತ್ತು. ವಿದೇಶಾಂಗ ಸಚಿವಾಲಯವು ಯಾವತ್ತೂ ದೇಶದ ಆಂತರಿಕ ರಾಜಕಾರಣದಲ್ಲಿ ಭಾಗಿಯಾಗಿಲ್ಲ, ಇದೇ ಮೊದಲ ಬಾರಿಗೆ ಅದು ಈ ನಿಟ್ಟಿನಲ್ಲಿ ಹೆಜ್ಜೆಯನ್ನು ಇಟ್ಟಿತು. ಈ ಕೃತಿಯಲ್ಲಿರುವ ವಿಷಯಗಳು ಕೂಡಾ ಅಸಾಮಾನ್ಯವಾದುದಾಗಿವೆ. ಅದು ‘ಭಾರತೀಯ ಚಿಂತನೆ’ಯನ್ನು ‘ಹಿಂದೂ ಚಿಂತನೆ’ಯ ಜೊತೆ ಸಮೀಕರಿಸಿದೆ ಮತ್ತು ಹಿಂದೂ ಸಮಾಜವು ತಾನಾಗಿಯೇ ಸಂಘಟಿತವಾಗುವ ಕೆಲಸವನ್ನು ಹೇಗೆ ಆರಂಭಿಸಿದೆಯೆಂಬ ಬಗ್ಗೆ ಈ ಕೃತಿಯಲ್ಲಿ ಹೇಳಲಾಗಿದೆ.

ಭಾರತವು ನೆಹರೂ ಕಾಲದ ಅಂತರ್‌ರಾಷ್ಟ್ರೀಯ ವಾದದಿಂದ ದೂರಸರಿದು ಬಹಿರಂಗವಾಗಿ ಹಿಂದುತ್ವವಾದದೊಂದಿಗೆ ತನ್ನನ್ನು ಬಿಂಬಿಸಿಕೊಳ್ಳುತ್ತಿರುವ ಕುರಿತ ಪುರಾವೆಗಳು ನಮ್ಮ ಸುತ್ತಮುತ್ತ ಗೋಚರಿಸುತ್ತಿದ್ದರೂ, ಈ ಬದಲಾವಣೆಯನ್ನು ಸರಕಾರವು ಅಧಿಕೃತವಾಗಿ ನಿರಾಕರಿಸುತ್ತಲೇ ಬಂದಿದೆ. ಆದರೆ ಭಾರತದ ರಾಜತಾಂತ್ರಿಕತೆಯಲ್ಲಿ ಆಗಿರುವ ಬದಲಾವಣೆಯ ಬಗ್ಗೆ ನಮಗೆ ಲಭ್ಯವಾಗುವ ಮಾಹಿತಿಯ ಮೂಲಗಳೆಂದರೆ ಅಂತರ್‌ರಾಷ್ಟ್ರೀಯ ಪತ್ರಿಕೆಗಳು ಹಾಗೂ ಸಂಶೋಧನಾ ಪ್ರಕಾಶನಗಳು. ಬ್ರಿಟನ್ ಮೂಲದ ಪತ್ರಿಕೆ ‘ಇಂಟರ್ ನ್ಯಾಶನಲ್ ಎಫೇರ್ಸ್‌’ ಭಾರತೀಯ ರಾಜತಾಂತ್ರಿಕತೆಯ ಮೇಲೆ ಹಿಂದೂ ರಾಷ್ಟ್ರೀಯವಾದದ ಪ್ರಭಾವದ ಹಾಗೂ ಈ ಕ್ರಾಂತಿಕಾರಿ ಬದಲಾವಣೆಯ ಅಮೂಲ್ಯವಾದ ವಿವರಗಳನ್ನು ಒದಗಿಸುತ್ತದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಉಪನ್ಯಾಸಕ ಕಿರಾ ಹುಜು ಅವರು ಬರೆದಿರುವ 18 ಪುಟಗಳ ಕರಡು ವಿಶ್ಲೇಷಣೆಯಲ್ಲಿ ಭಾರತದ ವಿದೇಶಾಂಗ ಇಲಾಖೆ, ರಾಯಭಾರಿ ಮತ್ತು ಹೈಕಮಿಶನ್ ಕಚೇರಿಗಳ ಕೇಸರೀಕರಣವನ್ನು ವಿವರಿಸಿದ್ದಾರೆ. ಈ ವರದಿಯು ಹೆಚ್ಚಾಗಿ ಆಕೆ ಹಾಲಿ ಹಾಗೂ ನಿವೃತ್ತ ಐಎಫ್‌ಎಸ್ ಕೇಡರ್‌ನ ಅಧಿಕಾರಿಗಳು ಹಾಗೂ ಹೊಸದಾಗಿ ನಿಯೋಜಿತರಾದ (ಹಿಂದುತ್ವವಾದಿ) ಅಧಿಕಾರಿಗಳೊಂದಿಗೆ ನಡೆಸಿದ 85 ಖಾಸಗಿ ಸಂದರ್ಶನಗಳನ್ನು ಆಧರಿಸಿದ್ದಾಗಿದೆ.

ಈ ಅಧ್ಯಯನ ವರದಿಯು ಭಾರತದ ವಿದೇಶಾಂಗ ನೀತಿಯು ‘ನೆಹರೂ ಯುಗದ ಅಂತರ್‌ರಾಷ್ಟ್ರೀಯವಾದ’ದಿಂದ ‘ಮೋದಿಯ ಹಿಂದುತ್ವಕ್ಕೆ ಪರಿವರ್ತನೆಗೊಂಡಿರುವುದು’, ‘ಹಿಂದುತ್ವ ಹಾಗೂ ದೈನಂದಿನ ರಾಜತಾಂತ್ರಿಕ ಆಚರಣೆಗಳು’ ಮತ್ತಿತರ ವಿಷಯಗಳನ್ನು ಒಳಗೊಂಡಿದೆ.

ಈ ಅಧ್ಯಯನ ವರದಿಯಲ್ಲಿ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಹಿಂದೂ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿರುವುದರ ಕುರಿತು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆರೆಸ್ಸೆಸ್ ಅಥವಾ ಅದಕ್ಕೆ ನಿಷ್ಠವಾದ ಸಂಸ್ಥೆಗಳು ಆಯೋಜಿಸಿರುತ್ತವೆ. ಇಂತಹ ಧಾರ್ಮಿಕ ಪಕ್ಷಪಾತಿ ಕಾರ್ಯಕ್ರಮಗಳು ರಾಜತಾಂತ್ರಿಕ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಾತ್ಯತೀತ ಮನೋಭಾವದ ಹಿಂದೂ ಅಧಿಕಾರಿಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇಂತಹ ಹಸ್ತಕ್ಷೇಪಗಳಿಂದಾಗಿ ಹಿರಿಯ ರಾಜತಾಂತ್ರಿಕರು, ಭಾರತೀಯ ರಾಯಭಾರಿ ಕಚೇರಿಗಳು ಹಾಗೂ ಹೈಕಮಿಶನ್ ಕಚೇರಿಗಳಲ್ಲಿ ಆರೆಸ್ಸೆಸ್ ಆಯೋಜಿಸುವ ಚಟುವಟಿಕೆಗಳನ್ನು ಆತಂಕದಿಂದ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿಯ ನಿಷ್ಠಾವಂತರು, ರಾಯಭಾರಿ, ಹೈಕಮಿಶನ್ ಕಚೇರಿಗಳ ಮುಖ್ಯಸ್ಥರ ಮೇಲೆ ಯಜಮಾನಿಕೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಲೇಖಕಿ ತನ್ನ ಕೃತಿಯಲ್ಲಿ ಹೇಳಿದ್ದಾರೆ.

ರಾಜತಾಂತ್ರಿಕ ಸಂವಹನಗಳಲ್ಲಿ ಹಿಂದಿ ಭಾಷೆಗೆ ಆಕ್ರಮಣಕಾರಿಯಾದ ರೀತಿಯಲ್ಲಿ ಉತ್ತೇಜನ ನೀಡಿರುವುದು ಹಾಗೂ ಇಂಗ್ಲಿಷ್ ಭಾಷೆಯನ್ನು ಮೂಲೆಗುಂಪು ಮಾಡುತ್ತಿರುವುದರಿಂದ ‘ಈ ಅಪ್ಪಟ ಭಾರತೀಕರಣ’ದ ವ್ಯಾಖ್ಯಾನದಿಂದ ತಾವು ಹೊರಗಿದ್ದೇವೆಂಬ ಭಾವನೆಯುಂಟಾಗಿದೆಯೆಂದು, ಲೇಖಕಿ ಕಿರಾ ಹುಜು ಅವರು ಭೇಟಿ ಮಾಡಿದ ಹಲವಾರು ರಾಜತಾಂತ್ರಿಕರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಆದರೆ ಭಾರತದ ಆಡಳಿತವು ಭಾರತೀಯರ ವಸಾಹತುಶಾಹಿ ಮನಸ್ಥಿತಿಯನ್ನು ತಡವಾಗಿಯಾದರೂ ಹೋಗಲಾಡಿಸಲು ಹಿಂದಿಗೆ ಆದ್ಯತೆ ನೀಡುವುದು ಅನಿವಾರ್ಯವಾಗಿದೆಯೆಂಬ ವಿಚಾರವನ್ನು ವಿದೇಶಿ ವಲಯಗಳಲ್ಲಿ ಬಿಂಬಿಸಲಾಗುತ್ತಿದೆ ಎಂದು ಕಿರಾ ಹೇಳುತ್ತಾರೆ.

ವಿದೇಶಿ ವ್ಯವಹಾರಗಳ ಕುರಿತಾದ ಲೇಖನದಲ್ಲಿ, 2019ರಲ್ಲಿ ನಡೆಸಲಾದ ಸಂದರ್ಶನದ ಸಮಯದಲ್ಲಿ ಜಾಗತಿಕ ವ್ಯವಹಾರಗಳ ಕುರಿತ ಭಾರತೀಯ ಮಂಡಳಿಗಾಗಿನ ಚೊಚ್ಚಲ ಹಿಂದಿ ಭಾಷಾ ಪುಸ್ತಕವನ್ನು ಪ್ರಕಟಿಸಲಾಯಿತು. ಪ್ರಪ್ರಥಮ ಹಿಂದಿ ಭಾಷಾ ವಿದೇಶಿ ನೀತಿ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿತ್ತು ಹಾಗೂ ಪ್ರಧಾನಿ ನೇತೃತ್ವದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮುಖ್ಯಸ್ಥರ ಸಮಾವೇಶವನ್ನು ಹಿಂದಿ ಭಾಷೆಯಲ್ಲಿ ಆಯೋಜಿಸಲಾಗಿತ್ತು.

ರಾಜತಾಂತ್ರಿಕ ತರಬೇತಿಯಲ್ಲಿ ಹಲವಾರು ಬದಲಾವಣೆಗಳನ್ನು ಈ ಅಧ್ಯಯನ ವರದಿಯು ಉಲ್ಲೇಖಿಸಿದೆ. ಭಾರತೀಯ ವಿದೇಶಿ ರಾಜತಾಂತ್ರಿಕ ಸೇವೆ (ಐಎಫ್‌ಎಸ್)ಯ ಯಶಸ್ವಿ ಅಭ್ಯರ್ಥಿಗಳು ತಮ್ಮ ಚೊಚ್ಚಲ ಹುದ್ದೆಯನ್ನು ಅಲಂಕರಿಸುವ ಮುನ್ನ ಅವರಿಗೆ ನೀಡಲಾಗುವ ರಾಜತಾಂತ್ರಿಕ ತರಬೇತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿರುವುದನ್ನು ವರದಿ ಉಲ್ಲೇಖಿಸಿದೆ. ತರಬೇತಿಯಲ್ಲಿ ಅವರು ಆಯುಷ್ ಸಚಿವಾಲಯದ ಅಭಿಪ್ರಾಯಗಳನ್ನು ಅನುಸರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಆಯುರ್ವೇದ, ಹೋಮಿಯೋಪಥಿ ಹಾಗೂ ಯೋಗ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗುತ್ತಿದೆ. ಸಾಮಾನ್ಯವಾಗಿ ಐಎಫ್‌ಎಸ್‌ಗೆ ಆಯ್ಕೆಯಾದವರಿಗೆ ತರಬೇತಿಯ ಅವಧಿಯಲ್ಲಿ ಅಂತರ್‌ರಾಷ್ಟ್ರೀಯ ಶೃಂಗಸಭೆ ಅಥವಾ ಸಮಾವೇಶಗಳಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡಲಾಗುತ್ತದೆಯಾದರೂ, 2019ರಲ್ಲಿ ಐಎಫ್‌ಎಸ್ ಉತ್ತೀರ್ಣ ಅಭ್ಯರ್ಥಿಗಳನ್ನು ಕುಂಭಮೇಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಳುಹಿಸಲಾಗಿತ್ತು.

ಭಾರತದಲ್ಲಿ ಹಿಂದೂ ರಾಷ್ಟ್ರವಾದವು, ಹಿಂದೂ ಧರ್ಮದ ಆಧ್ಯಾತ್ಮಿಕ ಶ್ರೇಷ್ಠತೆಗೆ ಉತ್ತೇಜನ ನೀಡುತ್ತದೆ ಹಾಗೂ ಮುಸ್ಲಿಮರಿಂದ ಹಿಂದೂಗಳು ಯಾತನೆಗೊಳಗಾಗಿದ್ದಾರೆ ಎಂಬಂತೆ ವ್ಯಾಖ್ಯಾನಿಸಲಾಗುತ್ತದೆ. ರಾಜತಾಂತ್ರಿಕತೆಯ ಸೋಗಿನಲ್ಲಿ ಅದು ಭಾರತವನ್ನು ಒಂದು ವೈವಿಧ್ಯಮಯ ಹಾಗೂ ಜಾತ್ಯತೀತ ದೇಶವಾಗಿ ಬಿಂಬಿಸುವುದಕ್ಕೆ ಸವಾಲೊಡ್ಡುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು ರಾಜತಾಂತ್ರಿಕತೆಯಲ್ಲಿ ಕಾಸ್ಮೊಪಾಲಿಟೀಕರಣದ (ಬಹುಜನಾಂಗೀಯ ಹಾಗೂ ಬಹುಸಂಸ್ಕೃತಿ) ಮಹತ್ವವನ್ನು ತಿರಸ್ಕರಿಸುತ್ತಾರೆ. 2014ರಲ್ಲಿ ರಾಜತಾಂತ್ರಿಕ ಪ್ರಶಿಕ್ಷಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಅವರು ಪರದೇಶಗಳನ್ನು ಒಂದೊಮ್ಮೆ ‘ಅಹಂಕಾರಿ ಚಿಕ್ಕಮ್ಮ’ನಿಗೆ ಹೋಲಿಸಿದ್ದು, ಅವು ಭಾರತಮಾತೆಯಷ್ಟು ವಿಶ್ವಾಸಾರ್ಹತೆಯನ್ನು ಹೊಂದಿಲ್ಲವೆಂದು ಹೇಳಿದ್ದರು.

ಈ ಸಂದರ್ಶನದಲ್ಲಿ ಹಿರಿಯ ಸಿಖ್ ಅಧಿಕಾರಿಯೊಬ್ಬರು ವೈವಿಧ್ಯತೆ ಹಾಗೂ ಜಾತ್ಯತೀತತೆಯ ವೌಲ್ಯಗಳನ್ನು ಎತ್ತಿಹಿಡಿಯುವುದಕ್ಕಾಗಿ ಅವರು ನಡೆಸಿದ್ದ ಹೋರಾಟವನ್ನು ವಿವರಿಸುವಾಗ ಅವರ ಕಣ್ಣುಗಳಲ್ಲಿ ನೀರು ಹರಿದುಬಂದಿತ್ತು. ಇನ್ನೋರ್ವ ನಿವೃತ್ತ ಮುಸ್ಲಿಮ್ ಅಧಿಕಾರಿಯೊಬ್ಬರು ಕೇವಲ ಐದು ವರ್ಷಗಳ ಹಿಂದೆಯಷ್ಟೇ ನಾವೆಲ್ಲರೂ ಕಾಸ್ಮೊಪಾಲಿಟನ್(ಬಹು ಜನಾಂಗೀಯ,ಬಹುಸಂಸ್ಕೃತಿ)ಗಳಾಗಿದ್ದೆವು. ಆದರೆ ಇಂದಿನ ಧ್ರುವೀಕರಣಗೊಂಡ ಪರಿಸರದಲ್ಲಿ ಸಂಕುಚಿತ ದೃಷ್ಟಿಯಿಂದ ಭಾರತೀಯ ಅಸ್ಮಿತೆಯನ್ನು ಪ್ರತಿಪಾದಿಸಲಾಗುತ್ತಿದೆ. ಸುಮಾರು 40 ವರ್ಷಗಳ ತನ್ನ ಸುದೀರ್ಘ ಸೇವೆಯಲ್ಲಿ ಒಮ್ಮೆ ಕೂಡಾ ತನ್ನ ಭಾರತೀಯ ಅಸ್ಮಿತೆಯನ್ನು ಹೇಳಿಕೊಳ್ಳಬೇಕಾಗಿ ಬಂದಿಲ್ಲ. ‘‘ಆದರೆ ಈಗ ಸಂಸ್ಕೃತಿ ಹಾಗೂ ಅಸ್ಮಿತೆಯ ಕುರಿತಾದ ವಿಷಯಗಳ 10 ಪುಸ್ತಕಗಳನ್ನು ನಾನೀಗ ಹೊಂದಿದ್ದೇನೆ’’ ಎಂದು ಹೇಳುತ್ತಾರೆ.

ಎನ್‌ಡಿಎ ಸರಕಾರದ ಮೊದಲನೇ ಆಳ್ವಿಕೆಯಲ್ಲಿ ವಿದೇಶಾಂಗ ಕಚೇರಿ ಹಾಗೂ ರಾಯಭಾರಿ ಕಚೇರಿಗಳ ಮೇಲೆ ರಾಷ್ಟ್ರೀಯತಾವಾದವು ಪರಿಣಾಮವನ್ನು ಬೀರಿರಲಿಲ್ಲ. ಆದರೆ ಹಾಲಿ ಎನ್‌ಡಿಎ ಆಡಳಿತದಲ್ಲಿ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ ಎಂದು ಹುಜು ಹೇಳುತ್ತಾರೆ.

ಆದರೆ ಹುಜು ಅವರ ಸಮೀಕ್ಷೆಯು ವಾಸ್ತವತೆಯನ್ನು ಪ್ರತಿನಿಧಿಸುವುದಿಲ್ಲವೆಂದು ವಾದಿಸುತ್ತಾರೆ. ಈಗ ನಡೆಯುತ್ತಿರುವುದನ್ನು ಕೆಲವು ಅಧಿಕಾರಿಗಳು ಮಾತ್ರವೇ ಇಷ್ಟಪಡುವುದಿಲ್ಲವೆಂದು ಅವರು ಹೇಳುತ್ತಾರೆ. ಅವರು ಕೂಡಾ ತಮ್ಮ ವೃತ್ತಿಜೀವನದ ಮೇಲೆ ಕೆಡುಕುಂಟಾಗಬಹುದೆಂಬ ಭೀತಿಯಿಂದ ವೌನವಾಗಿದ್ದುಬಿಟ್ಟಿದ್ದಾರೆಂದು ಅವರು ಹೇಳುತ್ತಾರೆ.

ನಮ್ಮ ಹಾಲಿ ವಿದೇಶಾಂಗ ನೀತಿಯನ್ನು ಆಯೋಜಿಸುವ ವಿಧಾನವು ಭದ್ರತಾ ಅಥವಾ ಆರ್ಥಿಕ ಹಿತಾಸಕ್ತಿಗಳನ್ನು ಉತ್ತೇಜಿಸುವುದಿಲ್ಲ ಅಲ್ಲದೆ ಅಂತರ್ ರಾಷ್ಟ್ರೀಯವಾಗಿ ನಮ್ಮ ನೀತಿಗಳ ಸ್ವೀಕಾರಾರ್ಹತೆಯಲ್ಲಿ ಹೆಚ್ಚಳವಾಗುವುದಿಲ್ಲ ಎಂದವರು ಹೇಳುತ್ತಾರೆ.

ಕೃಪೆ: thewire.in

Writer - ಪಿ. ರಾಮನ್

contributor

Editor - ಪಿ. ರಾಮನ್

contributor

Similar News