ವಿಂಡೀಸ್ ವಿರುದ್ಧದ ಮೊದಲ ಟಿ-20: ಭಾರತಕ್ಕೆ ಭರ್ಜರಿ ಜಯ
ಟರೊಬುವಾ (ಪೋರ್ಟ್ ಆಫ್ ಸ್ಪೇನ್): ರೋಹಿತ್ ಶರ್ಮಾ ಅವರ ಅದ್ಭುತ ಅರ್ಧಶತಕ ಮತ್ತು ದಿನೇಶ್ ಕಾರ್ತಿಕ್ ಅವರ ಮಿಂಚಿನ ಆಟದ ಫಲವಾಗಿ ಅತಿಥೇಯ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಭಾರತ 67 ರನ್‍ಗಳ ಭರ್ಜರಿ ಜಯ ಸಾಧಿಸಿದೆ.
ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಮತ್ತು ದಿನೇಶ್ ಕಾರ್ತಿಕ್ 19 ಎಸೆತಗಳಲ್ಲಿ ಅಜೇಯ 41 ರನ್‍ಗಳ ಕೊಡುಗೆ ನೀಡಿ ಭಾರತ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್‍ಗಳ ಗೌರವಾರ್ಹ ಮೊತ್ತ ಗಳಿಸಲು ಕಾರಣರಾದರು.
ಬಳಿಕ ಭಾರತದ ಬೌಲರ್ ಗಳು ಬಿಗಿ ದಾಳಿಯ ಮೂಲಕ ಅತಿಥೇಯ ತಂಡವನ್ನು ಕಟ್ಟಿಹಾಕಿದರು. ಕೊನೆಯ 3 ಓವರ್ ಗಳಲ್ಲಿ ಭಾರತ 45 ರನ್‍ಗಳನ್ನು ಗಳಿಸಿದ್ದು ನಿರ್ಣಾಯಕ ಎನಿಸಿತು.
ಉತ್ತಮ ಬೌನ್ಸ್ ಹಾಗೂ ಸ್ವಲ್ಪಮಟ್ಟಿಗೆ ತಿರುವು ಪಡೆಯುತ್ತಿದ್ದ ಪಿಚ್‍ನಲ್ಲಿ ಭಾರತದ ಸ್ಪಿನ್ನರ್‍ಗಳಾದ ರವಿಚಂದ್ರನ್ ಅಶ್ವಿನ್ (2/22) , ರವೀಂದ್ರ ಜಡೇಜಾ (1/26), ರವಿ ಬಿಷ್ಣೋಯಿ (2/26) ವಿಕೆಟ್‍ಗಳನ್ನು ಪಡೆದು ವೆಸ್ಟ್ ಇಂಡೀಸ್ ಪಡೆಯನ್ನು 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್‍ಗೆ ನಿಯಂತ್ರಿಸಿದರು.
ಆರಂಭದಲ್ಲಿ ಸ್ವಲ್ಪ ದುಬಾರಿ ಎನಿಸಿದರೂ ಅರ್ಷದೀಪ್ ಸಿಂಗ್ (2/24) ಮತ್ತು ಭುವನೇಶ್ವರ ಕುಮಾರ್ (1/11) ಕೂಡಾ ಮೊನಚಿನ ದಾಳಿ ನಡೆಸಿದರು. ವೆಸ್ಟ್ ಇಂಡೀಸ್ ಪರವಾಗಿ 20 ರನ್ ಗಳಿಸಿದ ಶಮರ್ಹ್ ಬ್ರೂಕ್ಸ್ ಗರಿಷ್ಠ ಸ್ಕೋರರ್ ಎನಿಸಿದರು.