ಟ್ವೆಂಟಿ-20 ಕ್ರಿಕೆಟ್ ನಲ್ಲಿ ಪ್ರಮುಖ ಮೈಲಿಗಲ್ಲು ತಲುಪಿದ ರೋಹಿತ್ ಶರ್ಮಾ

Update: 2022-07-30 05:00 GMT
Photo:PTI

ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧ ಶುಕ್ರವಾರ ನಡೆದ  ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ  ಕ್ರಿಕೆಟ್  ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅವರು ಮಹತ್ವದ ಮೈಲಿಗಲ್ಲು ತಲುಪಿದರು. ಕೇವಲ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 64 ರನ್ ಗಳಿಸಿದ  ರೋಹಿತ್ ನ್ಯೂಝಿಲೆಂಡ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅವರ ದಾಖಲೆಯನ್ನು  ಮೀರಿಸಿ ಪುರುಷರ ಟ್ವೆಂಟಿ-20 ಪಂದ್ಯದಲ್ಲಿ ಗರಿಷ್ಟ ರನ್ ಕಲೆ ಹಾಕಿದ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

 ರೋಹಿತ್ ಈಗ 129 ಪಂದ್ಯಗಳಲ್ಲಿ 27 ಅರ್ಧಶತಕ ಹಾಗೂ  4 ಶತಕಗಳೊಂದಿಗೆ  ಒಟ್ಟು 3,443 ರನ್ ಗಳಿಸಿದ್ದಾರೆ.

ಮತ್ತೊಂದೆಡೆ, ಗಪ್ಟಿಲ್ 116 ಪಂದ್ಯಗಳಲ್ಲಿ 20 ಅರ್ಧಶತಕ ಹಾಗೂ  3 ಶತಕಗಳ ಸಹಾಯದಿಂದ ಒಟ್ಟು 3,399 ರನ್ ಗಳಿಸಿದ್ದಾರೆ. ರೋಹಿತ್ ಅವರ ಸರಾಸರಿ 32.48 ಆಗಿದ್ದರೆ, ಗಪ್ಟಿಲ್ ಅವರ ಸರಾಸರಿ 32.37 ಆಗಿದೆ.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 99 ಪಂದ್ಯಗಳಲ್ಲಿ 50.12 ಸರಾಸರಿಯಲ್ಲಿ 3,308 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಐರ್ ಲ್ಯಾಂಡ್ ನ   ಪಾಲ್ ಸ್ಟಿರ್ಲಿಂಗ್ 2,894 ರನ್‌ಗಳೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ,  ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ 2,855 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್  ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತವು  20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ರೋಹಿತ್ 64 ರನ್ ಗಳಿಸಿ ಔಟಾದರೆ, ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 41 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ಅನ್ನು 20 ಓವರ್ ಗಳಲ್ಲಿ 8 ವಿಕೆಟಿಗೆ 122ಗೆ ನಿಯಂತ್ರಿಸಿದ ನಂತರ ಭಾರತವು 68 ರನ್‌ಗಳ ಜಯವನ್ನು ದಾಖಲಿಸಿದೆ.  ಅರ್ಷದೀಪ್ ಸಿಂಗ್, ರವಿಚಂದ್ರನ್ ಅಶ್ವಿನ್ ಹಾಗೂ  ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News