ಕೆಲವು ಜನರು ಮಾತ್ರ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತಾರೆ, ಉಳಿದವರು ಮೌನವಾಗಿ ಅನುಭವಿಸುತ್ತಾರೆ: ಸಿಜೆಐ ರಮಣ
ಹೊಸದಿಲ್ಲಿ,ಜು.30: ನ್ಯಾಯಕ್ಕಾಗಿ ಕೋರುವುದನ್ನು ‘ಸಾಮಾಜಿಕ ವಿಮೋಚನೆಯ ಸಾಧನ’ ಎಂದು ಶನಿವಾರ ಇಲ್ಲಿ ಬಣ್ಣಿಸಿದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರು, ಜನಸಂಖ್ಯೆಯ ಸಣ್ಣ ಶೇಕಡಾವಾರು ಮಾತ್ರ ನ್ಯಾಯಾಲಯಗಳಿಗೆ ಹೋಗುತ್ತಾರೆ,ಆದರೆ ಹೆಚ್ಚಿನವರು ಅರಿವು ಮತ್ತು ಅಗತ್ಯ ಮಾರ್ಗಗಳ ಕೊರತೆಯಿಂದಾಗಿ ಮೌನದಲ್ಲಿಯೇ ನರಳುತ್ತಾರೆ ಎಂದು ಹೇಳಿದರು. ತಂತ್ರಜ್ಞಾನವು ಹೆಚ್ಚು ಸಶಕ್ತ ಸಾಧನವಾಗಿ ಹೊರಹೊಮ್ಮಿದೆ ಎಂದು ಹೇಳಿದ ಅವರು,ನ್ಯಾಯ ವಿತರಣೆಯ ವೇಗವನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿಕೊಳ್ಳುವಂತೆ ನ್ಯಾಯಾಂಗವನ್ನು ಆಗ್ರಹಿಸಿದರು.
ಇಲ್ಲಿ ಮೊದಲ ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇದಕ್ಕೂ ಮುನ್ನ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು,ಕಾನೂನು ನೆರವಿಗಾಗಿ ಕಾಯುತ್ತ ಜೈಲುಗಳಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳ ಬಿಡುಗಡೆಯನ್ನು ತ್ವರಿತಗೊಳಿಸುವಂತೆ ನ್ಯಾಯಾಂಗವನ್ನು ಆಗ್ರಹಿಸಿದ್ದರು.
‘ನಮ್ಮ ಸಂವಿಧಾನದ ಪೀಠಿಕೆಯು ಪ್ರತಿಯೊಬ್ಬ ಪ್ರಜೆಗೂ ಭರವಸೆ ನೀಡಿರುವ ‘ನ್ಯಾಯ: ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ’ ಇದು ನ್ಯಾಯಾಂಗದ ದೃಷ್ಟಿಕೋನವಾಗಿದೆ. ವಾಸ್ತವದಲ್ಲಿ ಇಂದು ಕೆಲವೇ ಜನರಿಗೆ ಅಗತ್ಯವಿದ್ದಾಗ ನ್ಯಾಯ ವಿತರಣೆ ವ್ಯವಸ್ಥೆಯ ನೆರವು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಹೆಚ್ಚಿನವರು ಅರಿವು ಮತ್ತು ಅಗತ್ಯ ಮಾರ್ಗಗಳ ಕೊರತೆಯಿಂದಾಗಿ ಮೌನದಲ್ಲಿಯೇ ನರಳುತ್ತಾರೆ’ ಎಂದು ಹೇಳಿದ ನ್ಯಾ.ರಮಣ, ಸಮಾಜದಲ್ಲಿಯ ಅಸಮಾನತೆಗಳನ್ನು ತೊಡೆದುಹಾಕುವ ಗುರಿಯೊಂದಿಗೆ ಆಧುನಿಕ ಭಾರತವನ್ನು ನಿರ್ಮಿಸಲಾಗಿತ್ತು. ಪ್ರಜಾಪ್ರಭುತ್ವವು ಎಲ್ಲರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವುದರ ಕುರಿತಾಗಿದೆ. ಸಾಮಾಜಿಕ ವಿಮೋಚನೆಯ ಹೊರತಾಗಿ ಪಾಲ್ಗೊಳ್ಳುವಿಕೆಯು ಸಾಧ್ಯವಿಲ್ಲ. ನ್ಯಾಯ ವಿತರಣೆ ವ್ಯವಸ್ಥೆಯ ಪ್ರವೇಶವು ಸಾಮಾಜಿಕ ವಿಮೋಚನೆಗೆ ಸಾಧನವಾಗಿದೆ ಎಂದರು.
ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ಒದಗಿಸುವ ಮತ್ತು ಅವರ ಬಿಡುಗಡೆಯನ್ನು ಖಚಿತಪಡಿಸುವ ಕುರಿತು ಪ್ರಧಾನಿಗಳ ಅಭಿಪ್ರಾಯಗಳನ್ನು ಪ್ರತಿಧ್ವನಿಸಿದ ನ್ಯಾ.ರಮಣ, ವಿಚಾರಣಾಧೀನ ಕೈದಿಗಳ ಸ್ಥಿತಿಯು ದೇಶದಲ್ಲಿಯ ಕಾನೂನು ಸೇವೆಗಳ ಪ್ರಾಧಿಕಾರಗಳ ಕ್ರಿಯಾಶೀಲ ಪರಿಗಣನೆ ಮತ್ತು ಮಧ್ಯಪ್ರವೇಶಕ್ಕೆ ಕರೆ ನೀಡುವ ಅತ್ಯಂತ ಪ್ರಮುಖ ಅಂಶಗಳಲ್ಲೊಂದಾಗಿದೆ. ಇತ್ತೀಚಿಗೆ ನಡೆದ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಾಧೀಶರ ಸಮ್ಮೇಳನದಲ್ಲಿ ಪ್ರಧಾನಿಗಳು ಮತ್ತು ಅಟಾರ್ನಿ ಜನರಲ್ ಅವರು ಈ ವಿಷಯವನ್ನು ಸೂಕ್ತವಾಗಿಯೇ ಪ್ರಸ್ತಾಪಿಸಿದ್ದರು. ವಿಚಾರಣಾಧೀನ ಕೈದಿಗಳಿಗೆ ಅತ್ಯಂತ ಅರ್ಹವಾದ ಪರಿಹಾರವನ್ನು ದೊರಕಿಸುವಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಸಂಬಂಧಿಸಿದ ಎಲ್ಲರೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿರುವುದು ತನಗೆ ತೃಪ್ತಿಯನ್ನು ನೀಡಿದೆ ಎಂದರು.
‘ಸರಾಸರಿ 29 ವರ್ಷ ವಯೋಮಾನದೊಂದಿಗೆ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯ ಎರಡನೇ ದೇಶವಾಗಿರುವ ಭಾರತವು ಬೃಹತ್ ಕಾರ್ಯಪಡೆಯನ್ನು ಹೊಂದಿದೆ. ಆದಾಗ್ಯೂ ನುರಿತ ಕಾರ್ಮಿಕರು ನಮ್ಮ ಒಟ್ಟು ಕಾರ್ಯಪಡೆಯ ಕೇವಲ ಶೇ.3ರಷ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ನಾವು ನಮ್ಮ ಯುವಜನರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಿದೆ. ಪಾಶ್ಚಾತ್ಯ ದೇಶದಲ್ಲಿ ನುರಿತ ಮಾನವ ಸಂಪನ್ಮೂಲಗಳ ಕೊರತೆಯು ಹೆಚ್ಚುತ್ತಿರುವುದರೊಂದಿಗೆ ಜಾಗತಿಕವಾಗಿ,ಈ ಅಂತರವನ್ನು ತುಂಬುವುದು ಈಗ ಭಾರತದ ಸರದಿಯಾಗಿದೆ ’ಎಂದರು.
ಜಿಲ್ಲಾ ನ್ಯಾಯಾಂಗವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ನ್ಯಾಯ ವಿತರಣೆ ವ್ಯವಸ್ಥೆಯ ಬೆನ್ನೆಲುಬಾಗಿದೆ ಎಂದು ಬಣ್ಣಿಸಿದ ನ್ಯಾ.ರಮಣ, ಅದು ಹೆಚ್ಚಿನ ಜನರ ಮೊದಲ ಸಂಪರ್ಕ ಬಿಂದುವಾಗಿದೆ ಮತ್ತು ಅದನ್ನು ಸದೃಢಗೊಳಿಸುವುದು ಈ ಘಳಿಗೆಯ ಅಗತ್ಯವಾಗಿದೆ ಎಂದು ಹೇಳಿದರು.
ಲೋಕ ಅದಾಲತ್,ಮಧ್ಯಸ್ಥಿಕೆ ಮತ್ತು ಪಂಚಾಯಿತಿಕೆ ಕೇಂದ್ರಗಳಂತಹ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯಕ್ಕೂ ಅವರು ಒತ್ತು ನೀಡಿದರು.
ಸುಗಮ ನ್ಯಾಯವೂ ಸುಗಮ ಬದುಕಿನಷ್ಟೇ ಮುಖ್ಯ:ಮೋದಿ
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು,ಭಾರತವು ತನ್ನ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ನ್ಯಾಯದ ಸುಗಮತೆಯೂ ಜೀವನ ಸುಗಮತೆಯಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು.
ನಾಗರಿಕರು ನ್ಯಾಯಾಂಗದಲ್ಲಿ ಅತೀವ ನಂಬಿಕೆ ಹೊಂದಿದ್ದಾರೆ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಪ್ರವೇಶವು ಯಾವುದೇ ಸಮಾಜಕ್ಕೆ ನ್ಯಾಯ ವಿತರಣೆಯಷ್ಟೇ ಸಮಾನವಾಗಿದೆ ಎಂದರು.