ಸ್ಪೇನ್‌ ಹಾಗೂ ಬ್ರೆಝಿಲ್‌ ನಲ್ಲಿ ಮೊದಲ ಮಂಕಿಪಾಕ್ಸ್‌ ಸಾವು ವರದಿ

Update: 2022-07-30 15:48 GMT

ಮ್ಯಾಡ್ರಿಡ್,ಜು.30: ಸ್ಪೇನ್ ಹಾಗೂ ಬ್ರೆಝಿಲ್ನಲ್ಲಿ ಪ್ರಪ್ರಥಮ ಬಾರಿಗೆ ಮಂಕಿಪಾಕ್ಸ್ ಸೋಂಕಿನಿಂದ ಒಟ್ಟು ಎರಡು ಮಂದಿ ಸಾವನ್ನಪ್ಪಿರುವ ಬಗ್ಗೆ ಶುಕ್ರವಾರ ವರದಿಯಾಗಿದೆ.ಮಂಕಿಪಾಕ್ಸ್ನಿಂದ ಆಫ್ರಿಕದ ಹೊರಗಡೆ ಸಾವಿನ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲ ಸಲವಾಗಿದೆ. ಮಂಕಿಪಾಕ್ಸ್ನಿಂದ ತೀವ್ರವಾಗಿ ಬಾಧಿತವಾದ ದೇಶಗಳ ಪೈಕಿ ಸ್ಪೇನ್ ಕೂಡಾ ಒಂದಾಗಿದೆ. ಸ್ಪೇನ್ನಲ್ಲಿ ಒಟ್ಟು 4298 ಮಂದಿ ಸೋಂಕು ಪೀಡಿತರಾಗಿದ್ದಾರೆಂದು ಆರೋಗ್ಯ ಸಚಿವಾಲಯದ ತುರ್ತುಸ್ಥಿತಿ ಹಾಗೂ ಕಟ್ಟೆಚ್ಚರ ಸಮನ್ವಯ ಕೇಂದ್ರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಲಭ್ಯವಿರುವ ಮಾಹಿತಿಯ ಪ್ರಕಾರ ಸ್ಪೇನ್ನಲ್ಲಿ ಒಟ್ಟು 3750 ಮಂಕಿ ಪಾಕ್ಸ್ ರೋಗಿಗಳಿದ್ದು, ಅವರಲ್ಲಿ 120 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಹಾಗೂ ಓರ್ವ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.

 ಆದಾಗ್ಯೂ ಮಂಕಿಪಾಕ್ಸ್ ಸೋಂಕಿತನ ಸಾವಿಗೆ ಅಸಲಿ ಕಾರಣವನ್ನು ಬಹಿರಂಗಪಡಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಶವಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣವನ್ನು ಕಂಡುಹಿಡಿಯಲು ಸಾಧ್ಯವೆಂದು ಅವರು ಹೇಳಿದ್ದಾರೆ.

    ಬ್ರೆಝಿಲ್ನಲ್ಲಿ 41 ವರ್ಷ ವಯಸ್ಸಿನ ವ್ಯಕ್ತಿಯೊಬ ಮಂಕಿಪಾಕ್ಸ್ಗೆ ಬಲಿಯಾಗಿದ್ದಾನೆಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಬೆಲೊ ಹಾರಿರೊಂಟೆ ಎಂದು ಗುರುತಿಸಲಾಗಿದ್ದು, ಆತ ರೋಗ ನಿರೋಧಕ ಸಾಮರ್ಥ್ಯದ ತೀವ್ರ ಕೊರತೆಯಿಂದ ಬಳಲುತ್ತಿದ್ದನೆಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.ಬ್ರೆಝಿಲ್ನಲ್ಲಿ ಈವರೆಗೆ 1 ಸಾವಿರ ಮಂಕಿ ಪಾಕ್ಸ್ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ಸಾವೊ ಪೌಲೊ ಹಾಗೂ ರಿಯೊ ಡಿ ಜನೈರೊ ರಾಜ್ಯಗಳಲ್ಲಿ ವರದಿಯಾಗಿವೆ.

  ಆಫ್ಪಿಕವನ್ನು ಹೊರತುಪಡಿಸಿ ವಿಶ್ವದಾದ್ಯಂತ ಈವರೆಗೆ ಮಂಕಿಪಾಕ್ಸ್ನ 18 ಸಾವಿರ ಪ್ರಕರಣಗಳು ವರದಿಯಾಗಿವೆ. ಈ ಸೋಂಕು ರೋಗವು ಮೇ ತಿಂಗಳ ಆರಂಭದಲ್ಲಿ ಪ್ರಪ್ರಥಮ ಬಾರಿಗೆ ಆಫ್ರಿಕ ಖಂಡದ ಹೊರಗೆ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News