ಸಮನ್ವಯತೆ ಇದ್ದರೆ ಮಾನವ ಕಳ್ಳ ಸಾಗಾಣಿಕೆ ನಿಯಂತ್ರಣ ಸಾಧ್ಯ: ನ್ಯಾ.ನಟೇಶ್ ಆರ್.

Update: 2022-07-30 16:15 GMT

ಬ್ರಹ್ಮಾವರ, ಜು.30: ನಮ್ಮ ಸುತ್ತಮುತ್ತ ಮಾನವ ಕಳ್ಳ ಸಾಗಾಣಿಕೆ ನಿರಂತರ ವಾಗಿ ನಡೆಯುತ್ತಿದೆ. ದುರ್ಬಲ ಮಹಿಳೆಯರು, ಅಶಕ್ತರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದು, ಇದೊಂದು ಸುವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಕಾನೂನು ವ್ಯವಸ್ಥೆಯೊಂದಿಗೆ ನಮ್ಮಲ್ಲಿ ಸಮನ್ವಯತೆ ಇದ್ದಲ್ಲಿ ಇಂತಹ ಅಪರಾಧಗಳನ್ನು ಕಡಿಮೆ ಮಾಡಬಹುದು ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ನಟೇಶ್ ಆರ್ ಹೇಳಿದ್ದಾರೆ.

ಬ್ರಹ್ಮಾವರದ ಹಂದಾಡಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಹಂದಾಡಿ, ಚಾಂತಾರು, ವಾರಂಬಳ್ಳಿ ಗ್ರಾಪಂಗಳ ಸಹಯೋಗದಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಕೃತ್ಯಗಳ ಬಗ್ಗೆ ನಮಗೆ ಅರಿವಿಗೆ ಬಂದಲ್ಲಿ ಪೊಲೀಸ್ ಇಲಾಖೆಗೆ ಸುಳಿವನ್ನು ನೀಡುವ ಮೂಲಕ ನಮ್ಮ ಕರ್ತವ್ಯ ಪಾಲನೆ ಮಾಡಿದಲ್ಲಿ ಇಂತಹ ಕೃತ್ಯಗಳನ್ನು ಕಡಿಮೆ ಮಾಡಬಹುದು. ಹಕ್ಕು ಪ್ರತಿಪಾದನೆಗಿಂತ ಕರ್ತವ್ಯ ಪಾಲನೆ ಅತೀ ಮುಖ್ಯ. ವಿದ್ಯಾರ್ಥಿ ದೆಸೆಯಿಂದಲೇ ಈ ಬಗ್ಗೆ ಅರಿವು ಮೂಡಿಸಿದಲ್ಲಿ ನಾವು ಇದನ್ನು ನಿರ್ಮೂಲನೆ ಮಾಡಬಹುದು ಎಂದು ನಟೇಶ್ ಅಭಿಪ್ರಾಯಪಟ್ಟರು.

ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು.

ಹಂದಾಡಿ ಗ್ರಾಪಂ ಅಧ್ಯಕ್ಷೆ ಶೋಭಾ ಪೂಜಾರಿ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಪಂಡರಿನಾಥ್, ಚಾಂತಾರು ಗ್ರಾಪಂ ಅಧ್ಯಕ್ಷೆ ಬೇಬಿ ಪೂಜಾರಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಬಿ ಫುಟಾರ್ಡೋ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ಬ್ರಹ್ಮಾವರ ಪೊಲೀಸ್ ಠಾಣೆಯ ಮುಕ್ತ ಬಾಯಿ, ಶಿಕ್ಷಣ ಇಲಾಖೆಯ ಪ್ರಕಾಶ್ ಬಿ.ಬಿ ಉಪಸ್ಥಿತರಿದ್ದರು.

ಮಕ್ಕಳ ಅಭಿವೃದ್ಧಿ ಇಲಾಖೆಯ ಕುಮಾರ್ ನಾಯಕ್ ಸ್ವಾಗತಿಸಿದರು. ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಮಾನವ ಸರಪಳಿ ರಚಿಸಿ ನೀಲಿ ಬೆಲೂನ್ ಹಾರಿಸುವ ಮೂಲಕ ದಿನಾಚರಣೆಗೆ ಚಾಲನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News