ವಿಚಾರಣೆಗೆ ಹಾಜರಾಗದ ಹಿನ್ನೆಲೆ: ಸಂಜಯ್ ರಾವುತ್ ಮನೆಗೆ ಈಡಿ ಅಧಿಕಾರಿಗಳ ದಾಳಿ

Update: 2022-07-31 05:28 GMT
Photo:PTI

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಎರಡು ಬಾರಿ ಹಾಜರಾಗದ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಶಿವಸೇನೆ ಸಂಸದ ಸಂಜಯ್ ರಾವುತ್ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ರವಿವಾರ ಶೋಧ ಹಾಗೂ  ವಿಚಾರಣೆ ನಡೆಸಿದರು.

ದಿಲ್ಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಉಲ್ಲೇಖಿಸಿ ಹಿಂದಿನ ಸಮನ್ಸ್ ಅನ್ನು ತಪ್ಪಿಸಿದ ನಂತರ ಶಿವಸೇನ ನಾಯಕನನ್ನು ಜುಲೈ 27 ರಂದು ತನಿಖಾ ಸಂಸ್ಥೆಯು ವಿಚಾರಣೆಗೆ ಕರೆದಿತ್ತು.

ಬೆಳಿಗ್ಗೆ 7 ಗಂಟೆಗೆ ತನಿಖಾ ಸಂಸ್ಥೆ ತಂಡವು ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಮುಂಬೈನ ಪೂರ್ವ ಉಪನಗರದಲ್ಲಿರುವ ಭಾಂಡುಪ್‌ನಲ್ಲಿರುವ  ರಾವುತ್ ಅವರ ಮನೆಗೆ ತಲುಪಿತು ಹಾಗೂ  ಶೋಧ ಕಾರ್ಯವನ್ನು ಆರಂಭಿಸಿತು.

ಮುಂಬೈನಲ್ಲಿ ಚಾಲ್ ಅನ್ನು ಮರು-ಅಭಿವೃದ್ಧಿಪಡಿಸುವ ಯೋಜನೆ ವಹಿವಾಟಿಗೆ ಸಂಬಂಧಿಸಿದಂತೆ   ಜಾರಿ ನಿರ್ದೇಶನಾಲಯವು 60 ವರ್ಷದ ರಾವುತ್ ಹಾಗೂ  ಅವರ ಪತ್ನಿ ಮತ್ತು ನಿಕಟ ಸಹಚರರನ್ನು  ಪ್ರಶ್ನಿಸಲು ಬಯಸಿದೆ.

ಉದ್ಧವ್ ಠಾಕ್ರೆ ಪಾಳಯದಲ್ಲಿರುವ ರಾವುತ್ ಅವರು ಯಾವುದೇ ತಪ್ಪನ್ನು ನಿರಾಕರಿಸಿದ್ದಾರೆ ಹಾಗೂ  ರಾಜಕೀಯ ದ್ವೇಷದ ಕಾರಣಕ್ಕೆ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News