ಬ್ರಿಟನ್ ಯುವರಾಜನ ದತ್ತಿಸಂಸ್ಥೆಗೆ ಒಸಾಮಾ ಬಿನ್ ಲಾದೆನ್ ಕುಟುಂಬದಿಂದ ದೇಣಿಗೆ
ಲಂಡನ್, ಜು.31: ಬ್ರಿಟನ್‌ನ ಯುವರಾಜ ಪ್ರಿನ್ಸ್ ನಡೆಸುತ್ತಿರುವ ದತ್ತಿಸಂಸ್ಥೆಗೆ ಒಸಾಮಾ ಬಿನ್ ಲಾದೆನ್ ಕುಟುಂಬದವರು 1 ಮಿಲಿಯ ಪೌಂಡ್( ಸುಮಾರು 1.19 ಮಿಲಿಯನ್ ಡಾಲರ್) ದೇಣಿಗೆ ನೀಡಿದ್ದಾರೆ ಎಂದು ‘ ದಿ ಸಂಡೇ ಟೈಮ್ಸ್’ ವರದಿಮಾಡಿದೆ.
ಅಮೆರಿಕದಲ್ಲಿ ನಡೆದ 9/11ರ ಭಯೋತ್ಪಾದಕ ದಾಳಿಯ ಪ್ರಧಾನ ಸೂತ್ರಗಾರ ಎಂದು ಲಾದೆನ್‌ನನ್ನು ಗುರುತಿಸಲಾಗಿದೆ. ಸೌದಿ ಅರೆಬಿಯಾದಲ್ಲಿ ನೆಲೆಸಿರುವ ಲಾದೆನ್ ಕುಟುಂಬದವರ ವಿರುದ್ಧ ಯಾವುದೇ ತಪ್ಪೆಸಗಿದ ಆರೋಪಗಳಿಲ್ಲದಿದ್ದರೂ, ಬ್ರಿಟನ್ ಯುವರಾಜನ ದತ್ತಿಸಂಸ್ಥೆಯ ವಿರುದ್ಧ ಹಲವು ಅಕ್ರಮಗಳ ಆರೋಪ ಇರುವುದರಿಂದ ಈ ಪ್ರಕರಣ ಗಮನ ಸೆಳೆದಿದೆ.
ಲಾದೆನ್ ಕುಟುಂಬದ ಹಿರಿಯರಾದ ಬಕ್ರ್ ಬಿನ್ ಲಾದೆನ್ ಮತ್ತವರ ಸಹೋದರ ಶಫೀಕ್‌ರಿಂದ ದೇಣಿಗೆ ಸಂಗ್ರಹಿಸದಂತೆ ಹಲವರು ಚಾರ್ಲ್ಸ್‌ಗೆ ಸಲಹೆ ನೀಡಿದ್ದರು. ಆದರೆ ಈ ಸಲಹೆ, ಆಕ್ಷೇಪಣೆಗಳನ್ನು ಬದಿಗೆ ತಳ್ಳಿದ್ದ ಚಾರ್ಲ್ಸ್, ‘ಪ್ರಿನ್ಸ್ ಆಫ್ ವೇಲ್ಸ್ ಚಾರಿಟೇಬಲ್ ಫಂಡ್’ಗೆ (ಪಿಡಬ್ಲ್ಯೂಸಿಎಫ್) ಲಾದೆನ್ ಕುಟುಂಬದ ದೇಣಿಗೆ ಸ್ವೀಕರಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ದತ್ತಿಸಂಸ್ಥೆಯ ಐದೂ ಮಂದಿ ಟ್ರಸ್ಟಿಗಳು ಒಪ್ಪಿದ ಬಳಿಕವೇ ದೇಣಿಗೆ ಸ್ವೀಕರಿಸಲಾಗಿದೆ ಎಂದು ಪಿಡಬ್ಲ್ಯೂಸಿಎಫ್ ಅಧ್ಯಕ್ಷ ಇತಾನ್ ಚೆಶೈರ್ ಹೇಳಿದ್ದಾರೆ. ಚಾರ್ಲ್ಸ್ ನಡೆಸುತ್ತಿರುವ ಮತ್ತೊಂದು ದತ್ತಿ ಸಂಸ್ಥೆ ವಿರುದ್ಧ ಕಳೆದ ಫೆಬ್ರವರಿಯಲ್ಲಿ ಬ್ರಿಟನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.