ಮಣಿಪಾಲ: ತೋನ್ಸೆ ಮೋಹನದಾಸ್ ಪೈ ನಿಧನ

Update: 2022-07-31 16:58 GMT

ಮಣಿಪಾಲ, ಜು. 31: ಮಣಿಪಾಲದ ಪೈ ಕುಟುಂಬದ ಹಿರಿಯರಾದ ತೋನ್ಸೆ ಮೋಹನದಾಸ್ ಪೈ (89) ಅಲ್ಪಕಾಲದ ಅಸೌಖ್ಯದಿಂದ ಜು. 31ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವರು ಆಸ್ಪತ್ರೆಯಲ್ಲಿ ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಡಾ. ಟಿಎಂಎ ಪೈ ಪ್ರತಿಷ್ಠಾನ, ಶಿಕ್ಷಣ ಸಂಸ್ಥೆ ಎಂಜಿಎಂ ಕಾಲೇಜಿನ ಟ್ರಸ್ಟಿ, ಸಿಂಡಿಕೇಟ್ ಬ್ಯಾಂಕಿನ ಪೂರ್ವ ರೂಪ ಐಸಿಡಿಎಸ್ ಲಿ., ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಮೊದಲಾದ ಸಂಸ್ಥೆಗಳ ಅಧ್ಯಕ್ಷರಾಗಿ ಹಲವು ಸಂಸ್ಥೆಗಳ ಬೆಳವಣಿಗೆಗೆ ಕಾರಣರಾಗಿದ್ದರು.

1933ರ ಜೂ. 20ರಂದು ಜನಿಸಿದ ಮೋಹನದಾಸ್ ಪೈಯವರು ಡಾ. ಟಿಎಂಎ ಪೈಯವರ ಹಿರಿಯ ಪುತ್ರ. ಇವರಿಗೆ ಮೂರು ವರ್ಷ ಆಗಿರುವಾಗ ತಂದೆಯವರು ಉಡುಪಿಯಿಂದ ಮಣಿಪಾಲಕ್ಕೆ ಸ್ಥಳಾಂತರವಾದ ಕಾರಣ ಇವರೂ ಮಣಿಪಾಲದಲ್ಲಿ ಬೆಳೆದರು. ತಂದೆಯವರು ಆರಂಭಿಸಿದ ಹೊಸ ಶಾಲೆಯಲ್ಲಿ (ಮಣಿಪಾಲ ಅಕಾಡೆಮಿ ಶಾಲೆ), ಉಡುಪಿಯ ಮೋಡರ್ನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಬಳಿಕ ತಂದೆಯವರು ನೂತನವಾಗಿ ಆರಂಭಿಸಿದ ಎಂಜಿಎಂ ಕಾಲೇಜಿನಲ್ಲಿ (1949-51) ಇಂಟರ್‌ ಮೀಡಿಯೆಟ್ ಶಿಕ್ಷಣ ಪಡೆದರು. ಎಂಜಿಎಂ ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿ ಇವರು. ಕೊಲಾಪುರದಲ್ಲಿ ಕಾನೂನು ಶಿಕ್ಷಣ ಪಡೆದ (1951-53) ಮೋಹನದಾಸ್ ಪೈಯವರು ಪುಣೆ ವಿ.ವಿ.ಯಲ್ಲಿ ಪ್ರಥಮ ರ‌್ಯಾಂಕ್ ಗಳಿಸಿದ್ದರು. ಈ ವೇಳೆ ಕಾನೂನು ಪದವಿ ಅಧ್ಯಯನ ನಡೆಸಲು ಅವರು ಮುಂಬೈ ಪ್ರಾಂತ್ಯದ ಕೊಲಾಪುರಕ್ಕೆ ಹೋದರು.

ಶಿಕ್ಷಣದ ಬಳಿಕ ತಂದೆಯವರು ಆರಂಭಿಸಿದ ಸಂಸ್ಥೆಗಳಲ್ಲಿ ತೊಡಗಿದರು. ಅವರು ಮೊದಲಾಗಿ ಪ್ರವೇಶಿಸಿದ್ದು ಮಣಿಪಾಲದಲ್ಲಿ ಹೆಂಚಿನ ಕಾರ್ಖಾನೆ ನಡೆಸುತ್ತಿದ್ದ ಕೆನರಾ ಲ್ಯಾಂಡ್‌ ಇನ್‌ ವೆಸ್ಟ್‌ ಮೆಂಟ್ಸ್ ನ ಜನರಲ್ ಮೆನೇಜರ್ ಆಗಿ. ಇದರ ಜತೆ ಮಣಿಪಾಲ್ ಪವರ್ ಪ್ರೆಸ್‌ ಆಡಳಿತ ಪಾಲುದಾರರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡರು.

1970ರಲ್ಲಿ ಪೈಯವರ ಮುಂದಾಳತ್ವದಲ್ಲಿ ಮೋಹನದಾಸ್ ಪೈಯವರು ಆಡಳಿತ ನಿರ್ದೇಶಕರಾಗಿ, ಸತೀಶ್ ಪೈಯವರು ಜಂಟಿ ಆಡಳಿತ ನಿರ್ದೇಶಕರಾಗಿರುವ ಮಣಿಪಾಲ್ ಪ್ರಿಂಡರ್ಸ್‌ ಆ್ಯಂಡ್ ಪಬ್ಲಿಷರ್ಸ್ ಲಿ.ನಿಂದ ಉದಯವಾಣಿ ಆರಂಭಗೊಂಡಿತು. 1983ರಲ್ಲಿ ಆರಂಭಗೊಂಡ ‘ತರಂಗ’ ವಾರಪತ್ರಿಕೆಯೂ ಮೋಹನದಾಸ್ ಪೈಯವರ ಕನಸಿನ ಕೂಸು.

ಯುನೈಟೆಡ್ ಕಿಂಗ್‌ಡಮ್, ಯೂರೋಪ್, ಅಮೆರಿಕ, ಜಪಾನ್ ಮೊದಲಾದ ದೇಶಗಳಲ್ಲಿ ಸಂಚರಿಸಿದ ಪೈಯವರು, ದ್ರುಪ (ಜರ್ಮನಿ), ಐಪೆಕ್ಸ್ (ಯುಕೆ), ಪ್ರಿಂಟ್ (ಶಿಕಾಗೋ, ಅಮೆರಿಕ) ಮೊದಲಾದ ಮುದ್ರಣ ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಂಡು ಅಲ್ಲಿನ ಅನುಭವಗಳನ್ನು, ಹೊಸ ಹೊಸ ತಂತ್ರಜ್ಞಾನಗಳನ್ನು ಮಣಿಪಾಲದಲ್ಲಿ ಅಳವಡಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಕರ್ನಾಟಕ ಪತ್ರಿಕಾ ಅಕಾಡೆಮಿಯು ಪತ್ರಿಕಾ ರಂಗದ ಕ್ಷೇತ್ರಕ್ಕಾಗಿ ಸಲ್ಲಿಸಿದ ಕೊಡುಗೆಗಾಗಿ ಮಣಿಪಾಲ್ ಪ್ರಿಂಟರ್ಸ್ ಆ್ಯಂಡ್ ಪ‌ಬ್ಲಿಷರ್ಸ್ ಲಿ.ಗೆ ಕೊಡಮಾಡಿದ ಪ್ರಶಸ್ತಿಯನ್ನು ಮೋಹನದಾಸ್ ಪೈಯವರು ಸ್ವೀಕರಿಸಿದ್ದರು. ಪೈಯವರು ಇಂಡಿಯನ್ ನ್ಯೂಸ್‌ ಪೇಪರ್ ಸೊಸೈಟಿಯ (ಐಎನ್‌ಎಸ್) ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದರು.

ಐಸಿಡಿಎಸ್‌ನ ಜಂಟಿ ಆಡಳಿತ ನಿರ್ದೇಶಕರಾಗಿ 1989ರಲ್ಲಿ ನೇಮಕಗೊಂಡ ಪೈಯವರು 1995ರಲ್ಲಿ ಆಡಳಿತ ನಿರ್ದೇಶಕರಾದರು. ಬಳಿಕ ಚೆಯರ್‌ ಮ್ಯಾನ್ ಮತ್ತು ಆಜೀವ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷರಾಗಿ ಇದೇ ವೇಳೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಸಂಶೋಧನ ಕೇಂದ್ರ, ಎಂಜಿಎಂ ಯಕ್ಷಗಾನ ಕೇಂದ್ರದ ಅಧ್ಯಕ್ಷರಾಗಿಯೂ ಈ ಸಂಸ್ಥೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ.

ಡಾ. ಟಿಎಂಎ ಪೈಯವರು ಉಪಯೋಗಿಸುತ್ತಿದ್ದ ಪರಿಕರಗಳನ್ನು ಮಣಿಪಾಲದ ‘ಸ್ಮೃತಿ ಭವನ’ದಲ್ಲಿ (ಮ್ಯೂಸಿಯಂ) ಕಾಪಿಡಲು ವಿಶೇಷ ಶ್ರಮ ವಹಿಸಿದ್ದರು.

ಆ. 1ರ ಬೆಳಗ್ಗೆ 9ರಿಂದ 11 ಗಂಟೆವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News