ಸುರತ್ಕಲ್ | ಫಾಝಿಲ್ ಮನೆಗೆ ಎಸ್ ವೈ ಎಸ್ ನಿಯೋಗ ಭೇಟಿ
ಮಂಗಳೂರು, ಆ.1: ಸುರತ್ಕಲ್ ನಲ್ಲಿ ಜು.28ರಂದು ಕೊಲೆಯಾದ ಮುಹಮ್ಮದ್ ಫಾಝಿಲ್ ಮನೆಗೆ ಎಸ್ ವೈ ಎಸ್ ನಿಯೋಗವು ರವಿವಾರ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿತು.
ಬಳಿಕ ಮಾತನಾಡಿದ ಕರ್ನಾಟಕ ಎಸ್.ವೈ.ಎಸ್. ರಾಜ್ಯ ಕೋ ಆರ್ಡಿನೇಟರ್ ಮೌಲಾನ ಅಝೀಝ್ ದಾರಿಮಿ ಮಾತನಾಡಿ, ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ ಸರಣಿ ಅಶಾಂತಿ ವಾತಾವರಣಕ್ಕೆ ಕಾರಣವಾಗಿದೆ. ಇಂತಹ ಸಮಯದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಿ, ಸೂಕ್ತ ಭದ್ರತೆ ಕಲ್ಪಿಸಬೇಕಿದ್ದ ಸರಕಾರ ಈ ವಿಚಾರದಲ್ಲಿ ವಿಫಲವಾಗುತ್ತಿರುವುದು ಆತಂಕ ಮೂಡಿಸಿದೆ ಎಂದರು.
ಜೊತೆಗೆ ಮಾದ್ಯಮ ಗಳು ಜವಾಬ್ದಾರಿ ಮರೆತು ದ್ವೇಷ ಹರಡುವ ವಾರ್ತೆಗಳಿಗೆ ಮುಂದಾಗುತ್ತಿರುವುದು ಕಳವಳಕಾರಿ ಎಂದು ಅವರು ಅಭಿಪ್ರಾಯ ಪಟ್ಟರು.
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಿಸುವಲ್ಲಿ ಮುಖ್ಯಮಂತ್ರಿ ತಾರತಮ್ಯ ಧೋರಣೆ ಅನುಸರಿಸಿದ್ದನ್ನು ಖಂಡಿಸಿದ ನಿಯೋಗ, ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿತು.
ನಿಯೋಗದಲ್ಲಿ ಎಸ್ ವೈ ಎಸ್ ಮುಖಂಡರಾದ ತಬೂಕ್, ನೂರ್ ಮುಹಮ್ಮದ್, ಟಿ.ಮುಹಮ್ಮದ್ ಹಾಗೂ ಹೈಕೋರ್ಟ್ ವಕೀಲರಾದ ಮುಝಾಫರ್, ಬಿ ಹ್ಯೂಮನ್ ಮುಖ್ಯಸ್ಥ ಆಸಿಫ್ ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.