×
Ad

ಅಧಿವೇಶನ ಅರ್ಥಪೂರ್ಣವಾಗಿರಲಿ

Update: 2022-08-01 11:37 IST

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇದೂ ಕೂಡ ಜನರ ಹಣ ಪೋಲು ಮಾಡುವ ಮತ್ತೊಂದು ಅಧಿವೇಶನ ಮಾತ್ರವಾಗಲಿದೆಯೇ? ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಕಲಾಪಗಳು ಎಷ್ಟು ಫಲಪ್ರದವಾಗುತ್ತಿವೆ? ಅವುಗಳು ಜನರ ಆಶೋತ್ತರಗಳಿಗೆ ನಿಜವಾಗಿಯೂ ಸ್ಪಂದಿಸುತ್ತಿವೆಯೇ? ಚರ್ಚೆಗಳ ಗುಣಮಟ್ಟ ಎಲ್ಲಿಗೆ ತಲುಪಿದೆ? ಪ್ರಮುಖ ಕಾಯ್ದೆಗಳ ಕುರಿತ ಚರ್ಚೆಯೇ ಆಗದೆ ಇರುವುದರ ಗತಿಯೇನು? ಕೇಳಿಕೊಳ್ಳುತ್ತಿದ್ದರೆ ಮುಗಿಯದಷ್ಟು ಪ್ರಶ್ನೆಗಳು.

ಜುಲೈ 18ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ ವಾಗಿದೆ. ಆಗಸ್ಟ್ 12ರವರೆಗೆ ನಡೆಯಲಿರುವ ಅಧಿವೇಶನದಲ್ಲಿ 32 ಮಸೂದೆಗಳನ್ನು ಮಂಡಿಸಲು ಸರಕಾರ ತಯಾರಿ ನಡೆಸಿದೆ. ಇನ್ನೊಂದೆಡೆ ಸರಕಾರದ ಬೆವರಿಳಿಸಲು ಪ್ರತಿಪಕ್ಷಗಳೂ ನಿಂತಿವೆ. ಅಗ್ನಿಪಥ್‌ವಿಚಾರ, ಬೆಲೆ ಏರಿಕೆ, ಈ.ಡಿ, ಸಿಬಿಐನಂಥ ತನಿಖಾ ಸಂಸ್ಥೆಗಳ ದುರ್ಬಳಕೆ ಮೊದಲಾದ 13 ವಿಚಾರಗಳ ವಿಚಾರಗಳ ಮೇಲೆ ಚರ್ಚೆಗೆ ಅವು ಒತ್ತಾಯಿಸಿವೆ.

ಪ್ರತಿಪಕ್ಷಗಳು ಬೀಸುವ ಈ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸರಕಾರ ಸದನದಲ್ಲಿ ಉತ್ತಮ ಚರ್ಚೆ ಮತ್ತು ಫಲಪ್ರದ ಕಲಾಪದ ಮಾತಾಡಿದೆ. ಅಧಿವೇಶನಕ್ಕೂ ಮುಂಚಿನ ದಿನ ಮಾತನಾಡಿದ ಪ್ರಧಾನಿ ಎಲ್ಲ ಸಂಸದರೂ ಮುಕ್ತ ಮನಸ್ಸಿನಿಂದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದಿರುವುದು, ಸದನದ ಘನತೆ, ಪ್ರಜಾಪ್ರಭುತ್ವ ಎಂದೆಲ್ಲ ಮಾತಾಡಿರುವುದು ವರದಿಯಾಗಿದೆ.

ಪ್ರಶ್ನೆಯಿರುವುದು, ಅಧಿವೇಶನಗಳಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಂತಾಗಿರುವುದು ಮತ್ತು ಚರ್ಚೆಯೇ ಇಲ್ಲದೆ ಮಸೂದೆಗಳಿಗೆ ಅಂಗೀಕಾರ ಸಿಗುತ್ತಿರುವುದರ ಬಗ್ಗೆ. ಕಳೆದ ಸಲ ಅಧಿವೇಶನ ಹೇಗಾಯಿತು, ಹೇಗೆ ಮಹತ್ವದ ಮಸೂದೆಗಳೆಲ್ಲ ಚರ್ಚೆಯಿಲ್ಲದೆ ಅಂಗೀಕಾರಗೊಂಡವು ಎಂಬುದನ್ನು ನೋಡಿದ್ದೇವೆ.

ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಗಿರುವ ಮಲ್ಲಿಕಾರ್ಜುನ ಖರ್ಗೆ ಎತ್ತಿರುವ ಪ್ರಶ್ನೆ ಅತಿ ಮುಖ್ಯ ವಾದುದು. ‘‘14 ದಿನಗಳ ಈ ಅಧಿವೇಶನದಲ್ಲಿ 32 ಮಸೂದೆಗಳನ್ನು ಮಂಡಿಸಿ ಪಾಸು ಮಾಡಲು ಸರಕಾರ ನಿರ್ಧರಿಸಿದೆ. ಸರಕಾರ ಏನು ಮಾಡಲು ಪ್ರಯತ್ನಿಸುತ್ತಿದೆ?’’ ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ ಬಾರಿ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ, ಭಾರೀ ಕೋಲಾಹಲದ ನಡುವೆಯೇ ಸಂಸತ್ತಿನ ಎರಡೂ ಸದನಗಳಲ್ಲಿ ಸರಕಾರವು ಮಸೂದೆಗಳನ್ನು ಮಂಡಿಸುವ ಮತ್ತು ಅಂಗೀಕರಿಸುವ ಪ್ರಕ್ರಿಯೆಗಳನ್ನು ನಿಮಿಷಗಳಲ್ಲಿಯೇ ಪೂರ್ತಿಗೊಳಿಸಿತ್ತು. ಸಾಮಾನ್ಯ ಸಮಯದಲ್ಲಾದರೆ ಪ್ರಮುಖವಾದ ಪ್ರತಿಯೊಂದು ಮಸೂದೆಯೂ ಅಂಗೀಕಾರಗೊಳ್ಳುವ ಮುನ್ನ ಕೆಲವು ಗಂಟೆಗಳವರೆಗಾದರೂ ಚರ್ಚೆ ಯಾಗುತ್ತದೆ. ತೀರಾ ಪ್ರಮುಖ ಮಸೂದೆಗಳಂತೂ ಸ್ಥಾಯಿ ಸಮಿತಿ ಯಿಂದ ಪರಿಶೀಲನೆಗೆ ಒಳಪಟ್ಟ ಬಳಿಕವೇ ಅಂಗೀಕಾರಕ್ಕಾಗಿ ಮತ್ತೆ ಸದನದೆದುರು ಬರುವುದಿದೆ. ಸ್ಥಾಯಿ ಸಮಿತಿಗಳು ವಿವರವಾಗಿ ಪರಿಶೀಲಿಸುವುದರಿಂದ ಮಸೂದೆ ಉತ್ತಮಗೊಳ್ಳುತ್ತದೆ. ಪರಿಣಿತರ ಸಲಹೆ ಪರಿಗಣನೆಗೆ, ಎಲ್ಲರ ದೃಷ್ಟಿಕೋನವನ್ನೂ ಗಮನಿಸಲು ಸಾಕಷ್ಟು ಅವಕಾಶವಿರುತ್ತದೆ. ಅದಾದ ಬಳಿಕ ಮಸೂದೆಯನ್ನು ಉತ್ತಮ ಗೊಳಿಸಿ ಸಮಿತಿಯು ಮಾಡುವ ಶಿಫಾರಸುಗಳನ್ನು ಸರಕಾರ ಒಪ್ಪಿಕೊಳ್ಳಲೇಬೇಕಾಗುತ್ತದೆ. ಹೀಗೆ ಪರಿಶೀಲನೆಗೊಳಗಾದ ಮಸೂದೆ ಉತ್ತಮ ಕಾನೂನಾಗುವುದು ಸಾಧ್ಯ. ಜನರಿಗೆ ಒಳ್ಳೆಯ ಕಾನೂನುಗಳು ಬೇಕು ಮತ್ತು ಅಂಥ ಕಾನೂನನ್ನು ನೀಡಲು ಸಂಸತ್ತು ಬದ್ಧವಾಗಿರಬೇಕು.

ಆದರೆ ಈಗೇನಾಗುತ್ತಿದೆ? ಗದ್ದಲದ ನಡುವೆ ಮಸೂದೆಯೊಂದು ಮಂಡನೆಯಾಗುವುದು ಮತ್ತು ಕೆಲವೇ ನಿಮಿಷಗಳಲ್ಲಿ ಅಂಗೀಕಾರ ಗೊಳ್ಳುವುದು ಸಾಮಾನ್ಯವೇ ಆಗಿಬಿಟ್ಟಿದೆ. ಮಸೂದೆ ಯಾವುದರ ಕುರಿತಾಗಿತ್ತು ಎಂಬುದು ಕೂಡ ಸದನದಲ್ಲಿರುವ ಯಾರೊಬ್ಬರಿಗೂ ಗೊತ್ತಾಗುವುದಿಲ್ಲ. ಧ್ವನಿಮತದ ಮೂಲಕ ಅಂಗೀಕರಿಸಲಾಗುತ್ತದೆ. ಇದೊಂದು ಹಾಸ್ಯಾಸ್ಪದ ಯಾಂತ್ರಿಕ ಕಸರತ್ತಾಗಿಬಿಟ್ಟಿದೆ. ಇದರಲ್ಲಿ ಬಲಿಯಾಗುವುದು ಮಾತ್ರ ಕಾನೂನು ರಚನೆಯ ಪಾವಿತ್ರ್ಯತೆ. ಕಾನೂನು ರೂಪಿಸಬೇಕಾದವರಿಗೆ ತಾವೇನು ಕಾನೂನು ಮಾಡಿದೆವು ಎಂಬ ಅರಿವೇ ಇಲ್ಲದೆ ಕಾನೂನೊಂದು ರಚನೆಯಾಗಿಬಿಡುತ್ತದೆ. ಕಾನೂನು ರಚನೆಯಂಥ ಗಂಭೀರ ಪ್ರಕ್ರಿಯೆ ಈ ಮಟ್ಟಕ್ಕೆ ಬಂದಿರುವುದರ ನೇರ ಪರಿಣಾಮ ಆಗುವುದು ನಾಗರಿಕರ ಮೇಲೆ. ಯಾಕೆಂದರೆ ಪರಿಶೀಲನೆ ಗೊಳಗಾಗದ ಮಸೂದೆಯೊಳಗೆ ಹಾನಿಕಾರಕ ನಿಬಂಧನೆ ಉಳಿದು ಕೊಂಡುಬಿಡುವ ಸಾಧ್ಯತೆಯಿರುತ್ತದೆ. ಪ್ರಪಂಚದ ಯಾವುದೇ ಪ್ರಜಾಸತ್ತಾತ್ಮಕ ಸಂಸತ್ತು ವಿವರವಾದ ಚರ್ಚೆ ಮತ್ತು ಪರಿಶೀಲನೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸುವುದಿಲ್ಲ. ಸದನದಲ್ಲಿ ಅದಕ್ಕೆ ಸೂಕ್ತ ಸನ್ನಿವೇಶವಿಲ್ಲವಾಗಿದ್ದಲ್ಲಿ ಅಂಥ ಸನ್ನಿವೇಶವನ್ನು ಪುನಃಸ್ಥಾಪಿಸುವುದು, ಸದನ ಸುಗಮವಾಗಿ ನಡೆಯಲು ಅನುಕೂಲವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಸರಕಾರದ ಜವಾಬ್ದಾರಿ.

ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಬಹುದೇ? ಈ ಸೂಕ್ಷ್ಮ ವನ್ನು ನೋಡಲು ನಾವು ನಮ್ಮ ಸಂವಿಧಾನ ಮತ್ತು ಸದನದ ನಿಯಮ ಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ವಿಧಿ 107ರನ್ವಯ, ಉಭಯ ಸದನಗಳು ಒಪ್ಪದ ಹೊರತು ಯಾವುದೇ ಮಸೂದೆಯನ್ನು ಅಂಗೀಕರಿಸ ಲಾಗಿದೆ ಎಂದು ಪರಿಗಣಿಸಲಾಗದು. ಇಲ್ಲಿ ಒಪ್ಪಿಗೆ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಸಾಮಾನ್ಯವಾಗಿ, ನಾವು ಪ್ರಸ್ತಾಪವನ್ನು ವಿವರವಾಗಿ ಚರ್ಚಿಸಿದ ನಂತರವೇ ಒಪ್ಪಿಕೊಳ್ಳುತ್ತೇವೆ. ಆದ್ದರಿಂದ ಈ ಪದವು ಚರ್ಚೆಯನ್ನು ಸೂಚಿಸುತ್ತದೆ. ವಿಧಿ 107 ಸ್ಪಷ್ಟಪಡಿಸುವುದೇನೆಂದರೆ, ಎರಡೂ ಸದನಗಳು ಚರ್ಚಿಸಿದಾಗ ಮತ್ತು ನಂತರ ಒಪ್ಪಿದಾಗ ಮಾತ್ರ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಸಂವಿಧಾನದ ತಯಾರಕರು ಒಪ್ಪಿಗೆ ಎಂಬ ಪದದ ಬದಲಿಗೆ ಪಾಸಾಯಿತು ಎಂಬ ಪದವನ್ನು ಬಳಸಬಹುದಿತ್ತು. ಪಾಸಾಯಿತು ಎಂಬ ಪದವು ಮತದಾನ ಇತ್ಯಾದಿ ಪ್ರಕ್ರಿಯೆಗಳನ್ನು ಸೂಚಿಸುತ್ತದೆ. ಆದರೆ ಶಾಸಕಾಂಗ ಪ್ರಸ್ತಾವನೆಗಳನ್ನು ಒಪ್ಪಿಕೊಳ್ಳುವ ಮೊದಲು ಎರಡೂ ಸದನಗಳು ಸಂಪೂರ್ಣವಾಗಿ ಚರ್ಚಿಸಬೇಕೆಂದು ಅವರು ಬಯಸಿದ್ದರು. ಆದ್ದರಿಂದ ಒಪ್ಪಿಗೆ ಎಂಬ ಪದವಿದೆ.

ಈ ವಿಧಿಯ ಅಡಿಯಲ್ಲಿ ಮಸೂದೆಗಳನ್ನು ಅಂಗೀಕರಿಸುವ ನಿಯಮ ಗಳನ್ನು ರೂಪಿಸಲಾಗಿದೆ. ಪ್ರತೀ ಮಸೂದೆಗೂ ಕಡ್ಡಾಯವಾದ ಮೂರು ಹಂತದ ಪರಿಗಣನೆಯ ಅಗತ್ಯವಿದೆ. ಮೊದಲ ಹಂತದಲ್ಲಿ, ಮಸೂದೆಯ ಸಾಮಾನ್ಯ ತತ್ವಗಳನ್ನು ಪರಿಗಣಿಸಲಾಗುತ್ತದೆ; ಎರಡನೇ ಹಂತದಲ್ಲಿ, ಪ್ರತೀ ಷರತ್ತು ಮತ್ತು ತಿದ್ದುಪಡಿಗಳನ್ನು ಪರಿಗಣಿಸಲಾಗುತ್ತದೆ; ಮೂರನೇ ಹಂತದಲ್ಲಿ, ಅಂತಿಮ ಸುತ್ತಿನ ಅವಲೋಕನಗಳಿದ್ದು, ಆ ಬಳಿಕ ಮಸೂದೆಯನ್ನು ಅಂಗೀಕರಿಸಲಾಗುತ್ತದೆ. ಎರಡೂ ಸದನಗಳು ಒಪ್ಪುವ ಮೊದಲು ಮಸೂದೆಗಳನ್ನು ವಿವರವಾಗಿ ಚರ್ಚಿಸಲು ಸಾಧ್ಯವಾಗುವಂತೆ ವಿಧಿ 107ರ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಸಮರ್ಪಕ ವಾಗಿ ಅನುಷ್ಠಾನವಾದಲ್ಲಿ ಅದು ಜಾರಿಗೊಳಿಸುವ ಕಾನೂನುಗಳು ನಿರ್ಲಕ್ಷ ಅಥವಾ ಮೇಲ್ವಿಚಾರಣೆಯ ಕೊರತೆಯಿಂದ ಮುಕ್ತವಾಗ ಬಲ್ಲವು. ಆಗ ಅವು ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಸಂಸತ್ತು ಚರ್ಚೆ ಮತ್ತು ಪರಿಶೀಲನೆಯಿಲ್ಲದೆ ಮಸೂದೆ ಯನ್ನು ಅಂಗೀಕರಿಸಿದರೆ, ಅದು ನಾಗರಿಕರಿಗೆ ಹಾನಿಕಾರಕವಾದ ಕೆಟ್ಟ ಕಾನೂನಾದೀತು ಅಷ್ಟೆ.

ವಿರೋಧ ಪಕ್ಷದ ಸಂಸದರು ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಲು ಕಾರಣವೆಂದು ಸರಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳುವಂತಿಲ್ಲ. ಅಡ್ಡಿಪಡಿಸುವುದು ರಾಜಕೀಯ ಕ್ರಮವಾಗಿದ್ದು, ಇದಕ್ಕೆ ರಾಜಕೀಯ ಪರಿಹಾರವನ್ನು ಕಂಡು ಹಿಡಿಯಬೇಕು. ಕಾನೂನು ರಚನೆಯ ಸಾಂವಿಧಾನಿಕ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಇದನ್ನು ಬಳಸಕೂಡದು. ಸಂಸತ್ತಿನಲ್ಲಿ ಚರ್ಚೆ ಯಿಲ್ಲದೆ ಮಸೂದೆಗಳನ್ನು ಅಂಗೀಕರಿಸುವುದು 107ನೇ ವಿಧಿ ಮತ್ತು ಸದನದ ನಿಯಮಗಳ ಉಲ್ಲಂಘನೆಯೇ ಆಗಿದೆ.

ಕಳೆದ ವರ್ಷ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಯು ಪ್ರತಿಯೊಂದಕ್ಕೂ ಸುಮಾರು 34 ನಿಮಿಷಗಳ ಚರ್ಚೆಯೊಂದಿಗೆ 18 ಮಸೂದೆಗಳನ್ನು ಅಂಗೀಕರಿಸಿತು. ರಕ್ಷಣಾ ವಲಯದಲ್ಲಿನ ಮುಷ್ಕರ, ಲಾಕ್‌ಔಟ್‌ಗಳು ಮತ್ತು ಲೇ-ಆಫ್‌ಗಳನ್ನು ನಿಷೇಧಿಸಲು ಸರಕಾರಕ್ಕೆ ಅನುವು ಮಾಡಿಕೊಡುವ ಅಗತ್ಯ ರಕ್ಷಣಾ ಸೇವೆಗಳ ಮಸೂದೆ (2021) ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾದದ್ದು 12 ನಿಮಿಷ ಮಾತ್ರ. ಇದೇ ವೇಳೆ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ (2021) ಬಗ್ಗೆ ಕೇವಲ ಐದು ನಿಮಿಷಗಳ ಚರ್ಚೆಯಾಯಿತು. ಹೀಗೆ ಸದನದಲ್ಲಿ ಚರ್ಚೆಯ ಸಂಪ್ರದಾಯವೇ ಇಲ್ಲವಾಗಿದೆಯೆಂದರೆ ಏನರ್ಥ? ಇದು ಗಂಭೀರವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ.

ಶಾಸನದ ಮೇಲಿನ ಚರ್ಚೆಯು ಸಂಸದೀಯ ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ. ಅಮೆರಿಕದಲ್ಲಿ 2013ರಲ್ಲಿ Obama care

ವಿರುದ್ಧ ಸೆನೆಟ್ ಹೌಸ್‌ನಲ್ಲಿ 21 ಗಂಟೆ 19 ನಿಮಿಷಗಳ ಕಾಲ ಸೆನೆಟರ್ ಟೆಡ್ ಕ್ರೂಜ್ ಮಾತನಾಡಲು ಅವಕಾಶವನ್ನು ನೀಡಲಾಯಿತು. ಸಂಸತ್ತಿನ ಪ್ರಕ್ರಿಯೆಗಳು ಅಂತಹ ಚರ್ಚೆಗಳಿಗೆ ಸಮಯವನ್ನು ಮೀಸಲಿಟ್ಟಾಗ, ಶಾಸನದ ಗುಣಮಟ್ಟವು ಸುಧಾರಿಸುತ್ತದೆ, ಅದು ಒಮ್ಮತಕ್ಕೂ ಅವಕಾಶ ವೊದಗಿಸುತ್ತದೆ. ಆದರೆ ನಮ್ಮಲ್ಲಿ ಏನಾಗುತ್ತಿದೆ? ಅತ್ಯಂತ ಪ್ರಮುಖ ಕೃಷಿ ಕಾನೂನುಗಳ ರದ್ದತಿ ಮಸೂದೆ (2021) ಅನ್ನು ಲೋಕಸಭೆಯಲ್ಲಿ ಮೂರು ನಿಮಿಷ ಹಾಗೂ ರಾಜ್ಯಸಭೆಯಲ್ಲಿ ಐದು ನಿಮಿಷ ಹೀಗೆ ಬರೀ ಎಂಟು ನಿಮಿಷಗಳಲ್ಲಿ ಅಂಗೀಕರಿಸಲಾಯಿತು, ಅಂದರೆ ಇಲ್ಲಿ ಸಂಸದರಿರುವುದು ತಲೆಲೆಕ್ಕಕ್ಕೆ ಮಾತ್ರ. ಆದರೆ ಇದು ಕ್ರಮವಲ್ಲ.

ಉತ್ತರದಾಯಿತ್ವವನ್ನು ಖಾತ್ರಿಪಡಿಸುವ ಮತ್ತೊಂದು ಮಾರ್ಗ ವೆಂದರೆ ಸಂಸದೀಯ ಸಮಿತಿಗಳು. ಅಮೆರಿಕದಲ್ಲಿ ಸೆನೆಟ್ ಮತ್ತು ಸದನ ಸಮಿತಿಗಳು ಕಾನೂನುಗಳನ್ನು ಪರಿಶೀಲಿಸುತ್ತವೆ, ಸರಕಾರಿ ನೇಮಕಾತಿಗಳನ್ನು ದೃಢೀಕರಿಸುತ್ತವೆ, ತನಿಖೆಗಳನ್ನು ಮತ್ತು ವಿಚಾರಣೆ ಗಳನ್ನು ನಡೆಸುತ್ತವೆ. ಇಂಗ್ಲೆಂಡ್‌ನಲ್ಲಿ, ಹೌಸ್ ಆಫ್ ಕಾಮನ್ಸ್ 2013ರಲ್ಲಿ ಸಾರ್ವಜನಿಕರು ವೆಬ್ ಪೋರ್ಟಲ್ ಮೂಲಕ ಓದಿ ಕರಡು ಶಾಸನಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ಅವಕಾಶ ಮಾಡಿತು. 1,000 ವ್ಯಕ್ತಿಗಳು 1,400ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ನೀಡಿದ್ದರು. ಭಾರತದಲ್ಲಿ, ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳು ಸಂಸದೀಯ ಪರಿಶೀಲನೆಗೆ ಒಳಪಡುವುದೇ ಇಲ್ಲ, ಕೇವಲ ವಾರ್ಷಿಕ ವೆಚ್ಚಗಳನ್ನು ಅನುಮೋದಿಸ ಲಾಗುತ್ತದೆ. ನ್ಯೂಝಿಲ್ಯಾಂಡ್ ಎಲ್ಲಾ ಮಸೂದೆಗಳನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಶಿಫಾರಸು ಮಾಡುವುದನ್ನು ಕಡ್ಡಾಯಗೊಳಿಸಿದೆ.

ಸಂಸದೀಯ ಪ್ರಜಾಪ್ರಭುತ್ವದ ಮತ್ತೊಂದು ವೈಶಿಷ್ಟವೆಂದರೆ ಸಂಸದರುತೊಡಗಿಸಿಕೊಳ್ಳುವಿಕೆಗೆ ಅವಕಾಶ ಮಾಡಿಕೊಡುವುದು. ಕೆಲವೊಮ್ಮೆ, ಇದು ಖಾಸಗಿ ಸದಸ್ಯ ಬಿಲ್‌ಗಳ ರೂಪದ್ದಾಗಿರಬಹುದು. 2019ರಿಂದ ಇಂಗ್ಲೆಂಡ್ ಏಳು ಖಾಸಗಿ ಸದಸ್ಯರ ಮಸೂದೆಗಳನ್ನು ಅಂಗೀಕರಿಸಿದೆ, ಕೆನಡಾ ಆರು ಮಸೂದೆಗಳನ್ನು ಅಂಗೀಕರಿಸಿದೆ. ಭಾರತದಲ್ಲಿ, 1952 ರಿಂದ ಉಭಯ ಸದನಗಳಲ್ಲಿ ಕೇವಲ 14 ಖಾಸಗಿ ಸದಸ್ಯ ಮಸೂದೆ ಗಳನ್ನು ಅಂಗೀಕರಿಸಲಾಗಿದೆ. ಅವುಗಳಲ್ಲಿ ಆರು ನೆಹರೂ ಅಧಿಕಾರದಲ್ಲಿ ದ್ದಾಗಿನವೇ.

ಸಂಸತ್ತಿನ ಆಚೆಗೂ ಹೆಚ್ಚಿನ ಸಂಸದರಿಗೆ, ತಮ್ಮ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಅವಕಾಶ ಸೀಮಿತವಾಗಿದೆ. ಸಂಸತ್ತಿನ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ (MPLAD) ಯೋಜನೆಯನ್ನು ನೋಡುವುದಾದರೆ, ಇದು ಗರಿಷ್ಠ 5 ಕೋಟಿ ರೂ. ಮಿತಿಯೊಂದಿಗೆ ಸ್ಥಳೀಯ ಜಿಲ್ಲಾ ಪ್ರಾಧಿಕಾರಕ್ಕೆ ಆಯ್ದ ಅಭಿವೃದ್ಧಿ ಕ್ರಮಕ್ಕೆ ಶಿಫಾರಸು ಮಾಡಲು ಸಂಸದರಿಗೆ ಅನುವು ಮಾಡಿಕೊಡುತ್ತದೆ. ಭಾರತದಲ್ಲಿ ಸುಮಾರು 6,38,000 ಹಳ್ಳಿಗಳಿದ್ದು, ಸರಾಸರಿ ಲೆಕ್ಕದಲ್ಲಿ ಒಂದೊಂದು ಸಂಸತ್ ಕ್ಷೇತ್ರವು 1,000 ಹಳ್ಳಿಗಳನ್ನು ಒಳಗೊಳ್ಳುತ್ತದೆ. ಮೊತ್ತವನ್ನು ಸಮಾನವಾಗಿ ವಿಭಜಿಸಿದರೆ, ಅದು ಪ್ರತೀ ಪ್ರದೇಶಕ್ಕೆ 15,000 ರೂ.ವರೆಗೆ ಬರುತ್ತದೆ. ಇದರಿಂದ ಆಗುವುದೇನು? ಈ ಹಣವನ್ನೂ ಕಳೆದ ಒಂದೂವರೆ ವರ್ಷದಿಂದ ಒದಗಿಸುತ್ತಿಲ್ಲ. ಫಿಲಿಪ್ಪೀನ್ಸ್‌ನಂತಹ ದೇಶದಲ್ಲಿ, ಆದ್ಯತಾ ಅಭಿವೃದ್ಧಿ ಸಹಾಯ ನಿಧಿಯು ಸೆನೆಟರ್‌ಗಳಿಗೆ ಸಣ್ಣ-ಪ್ರಮಾಣದ ಮೂಲಸೌಕರ್ಯ ಮತ್ತು ಸಮುದಾಯ ಯೋಜನೆಗಳಿಗೆ ಹಣವನ್ನು ಒದಗಿಸುತ್ತದೆ. ಅಂತಹ ಯೋಜನೆಗಳು ಕ್ಷೇತ್ರ-ನಿರ್ದಿಷ್ಟ ಅಭಿವೃದ್ಧಿಗೆ ಅವಕಾಶ ಮಾಡಿ, ತಳಮಟ್ಟದ ಪ್ರಜಾಪ್ರಭುತ್ವವನ್ನು ಸಕ್ರಿಯಗೊಳಿಸುತ್ತದೆ.

ಇನ್ನು ಭಾರತದಲ್ಲಿನ ಸಂಸದರು ಸರಾಸರಿ 25 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಪ್ರತಿನಿಧಿಸುತ್ತಾರೆ. ಈ ಪ್ರಮಾಣವು ಬೋಟ್ಸ್ವಾನಾ, ಸ್ಲೊವೇನಿಯಾ, ಎಸ್ಟೋನಿಯಾ ಮತ್ತು ಭೂತಾನ್‌ನಂತಹ ದೇಶಗಳ ಜನಸಂಖ್ಯೆಗಿಂತ ಹೆಚ್ಚು. ಇಂಗ್ಲೆಂಡ್‌ನ ಪ್ರತೀ ಸಂಸದರು 92,000 ನಾಗರಿಕರನ್ನು ಪ್ರತಿನಿಧಿಸುತ್ತಾರೆ, ಅಮೆರಿಕದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಪ್ರತೀ ಸದಸ್ಯರು 7,00,000 ಜನರಿಗೆ ಜವಾಬ್ದಾರ ರಾಗಿರುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಪ್ರತಿನಿಧಿಸುವಾಗ ಯಾವುದೇ ಸಂಸದರು ತಮ್ಮ ಮತದಾರರ ಹಿತಾಸಕ್ತಿಗಳನ್ನು ಸಮರ್ಪಕ ವಾಗಿ ಪ್ರತಿನಿಧಿಸಲು ಸಾಧ್ಯವಿಲ್ಲ.

ಹೀಗೆ ವಾಸ್ತವವಿರುವಾಗ, ಸಂಸತ್ ಅಧಿವೇಶನದ ನಿಗದಿತ ಅವಧಿಯಾದರೂ ಈ ದೇಶದ ನಾಗರಿಕ ಹಿತಾಸಕ್ತಿಯನ್ನು ಕಾಯಲು ಸದ್ಬಳಕೆಯಾಗಬೇಕು. ಅವರಿಗೇನು ಬೇಕಾಗಿದೆಯೆಂಬುದರ ನಿಟ್ಟಿನಲ್ಲಿ ಚಿಂತನ ಮಂಥನವಾಗುವುದಕ್ಕೆ ಸದನದೊಳಗೆ ಕಳಕಳಿಯ ವಾತಾವರಣ ನಿರ್ಮಾಣವಾಗಬೇಕು. ತಾನು ಅಂದುಕೊಂಡಿರುವುದನ್ನೇ ಸಾಧಿಸಿ ಮುಗಿಸಬಿಡಬೇಕೆಂಬ ಧೋರಣೆಯಲ್ಲಿ ಸರಕಾರದ ನಡೆ ಇದ್ದರೆ ಅಂತಹ ವಾತಾವರಣ ಸೃಷ್ಟಿ ಸಾಧ್ಯವೇ ಇಲ್ಲ.

ನಮ್ಮ ಸಂಸತ್ತಿನಲ್ಲಿ ಕಳೆದ ಬಾರಿ ಪೆಗಾಸಸ್ ಗದ್ದಲಕ್ಕೆ ಕಲಾಪ ಬಲಿಯಾದ ವಿಚಾರವನ್ನೇ ತೆಗೆದುಕೊಂಡರೆ, ಸರಕಾರವೇ ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ, ನಿಗದಿತ 107 ಗಂಟೆಗಳಲ್ಲಿ ಕಲಾಪ ನಡೆದದ್ದು 18 ತಾಸುಗಳು ಮಾತ್ರ. ಅಧಿವೇಶನಕ್ಕೆ ಆದ ವೆಚ್ಚ 133 ಕೋಟಿ ರೂ.ಗೂ ಅಧಿಕ. ಮತ್ತಿದು ತೆರಿಗೆ ಪಾವತಿಸುವ ಈ ದೇಶದ ನಾಗರಿಕರ ದುಡ್ಡು.

ಅಂಕಿ ಅಂಶಗಳ ಪ್ರಕಾರ, ಕಳೆದ ಬಾರಿಯ ಮುಂಗಾರು ಅಧಿವೇಶನದ ಲೋಕಸಭಾ ಕಲಾಪ ಕಳೆದೆರಡು ದಶಕಗಳಲ್ಲಿಯೇ ಮೂರನೇ ಅತಿ ಕಡಿಮೆ ಫಲಿತಾಂಶದ್ದು. ಹಾಗೆಯೇ ರಾಜ್ಯಸಭೆ ಕಲಾಪ 1999ರಿಂದೀಚಿನ ಕಲಾಪಗಳಲ್ಲಿಯೇ ಎಂಟನೇ ಸ್ಥಾನಕ್ಕೆ ಇಳಿಯುವಷ್ಟು ಮಟ್ಟಿಗೆ ಕಡಿಮೆ ಫಲಿತಾಂಶದಿಂದ ಕೂಡಿದ್ದಾಗಿತ್ತು.

ದಾಖಲೆಗಳ ಪ್ರಕಾರ, 2010ರ ಚಳಿಗಾಲದ ಅಧಿವೇಶನವು ಎರಡೂ ಸದನಗಳ ಕಳಪೆ ಉತ್ಪಾದಕತೆಯೊಂದಿಗೆ ಅತ್ಯಂತ ಕೆಟ್ಟ ಅಧಿವೇಶನ ವಾಗಿದೆ. ಆಗ ಪ್ರತಿಪಕ್ಷ ಸ್ಥಾನದಲ್ಲಿ ಕೂತಿದ್ದ ಬಿಜೆಪಿ, 2ಜಿ ತರಂಗಾಂತರ ಪರವಾನಿಗೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಆಗ್ರಹಿಸಿ ಕಲಾಪಕ್ಕೆ ಅಡ್ಡಿಪಡಿಸಿತ್ತು.

ಹಾಗೆಯೇ ಲೋಕಸಭೆಯ ಕಲಾಪಕ್ಕೆ ಸಂಬಂಧಿಸಿ 2013 ಮತ್ತು 2016ರ ಚಳಿಗಾಲದ ಅಧಿವೇಶನಗಳು ಉತ್ಪಾದಕತೆ ದೃಷ್ಟಿಯಿಂದ ಎರಡನೇ ಅತಿ ಕೆಟ್ಟ ಅಧಿವೇಶನಗಳಾಗಿವೆ ಎನ್ನುತ್ತವೆ ದಾಖಲೆಗಳು.

ರಾಜ್ಯಸಭೆಗೆ ಸಂಬಂಧಿಸಿದಂತೆ, 2019ರ ಬಜೆಟ್ ಅಧಿವೇಶನ ಅಂದರೆ 16ನೇ ಲೋಕಸಭೆಯ ಕೊನೆಯ ಅಧಿವೇಶನ ಉತ್ಪಾದಕತೆಯ ವಿಷಯ ದಲ್ಲಿ ಎರಡನೇ ಕೆಟ್ಟ ಅಧಿವೇಶನವಾಗಿತ್ತು. ರಫೇಲ್ ಯುದ್ಧವಿಮಾನ ಒಪ್ಪಂದದಿಂದ ಪೌರತ್ವ (ತಿದ್ದುಪಡಿ) ಮಸೂದೆಯವರೆಗಿನ ವಿಚಾರವಾಗಿ ಪ್ರತಿಪಕ್ಷಗಳ ಗದ್ದಲ ಈ ಅಧಿವೇಶನಗಳ ಸಮಯವನ್ನು ತಿಂದುಹಾಕಿತ್ತು.

ಪ್ರತಿಪಕ್ಷಗಳಿಂದಾಗಿ ಹೀಗಾಯಿತು ಎಂದು ಎಲ್ಲವನ್ನೂ ಪ್ರತಿಪಕ್ಷಗಳ ತಲೆಗೆ ಕಟ್ಟುವ ಸರಕಾರ ತಾನು ಮಾತ್ರ ಜನರಿಗಾಗಿ ಮಿಡಿಯುತ್ತಿರುವಂತೆ ಬಿಂಬಿಸಿಕೊಳ್ಳಲು ಹಾತೊರೆಯುವುದೇ ಹಾಸ್ಯಾಸ್ಪದವಾದದ್ದು. ಯಾವುದೇ ಆಡಳಿತಾರೂಢ ಸರಕಾರವೂ ಜನಪರವಾಗಿ ಯೋಚಿಸದೇ ಹೋದಾಗ, ಸಮಾಜಮುಖಿ ಒಳಗೊಳ್ಳುವಿಕೆಗೆ ತನ್ನನ್ನು ತಾನು ತೆರೆದುಕೊಳ್ಳದೇ ಹೋದಾಗ ಕಡೆಗೆ ಅಧಿವೇಶನಗಳೂ ಗದ್ದಲದಲ್ಲಿಯೇ ಮುಳುಗುವಂತಾಗುತ್ತದೆ.

ಚರ್ಚೆಗೆ ಅನುವಾಗುವುದರಲ್ಲಿ ಮತ್ತು ಅನುವು ಮಾಡಿಕೊಡುವು ದರಲ್ಲಿಯೇ ಪ್ರಜಾಪ್ರಭುತ್ವದ ನಿಜವಾದ ಅರ್ಥವಿರುವುದು. ಅದನ್ನು ಅರ್ಥ ಮಾಡಿಕೊಳ್ಳದೇ ಅಧಿವೇಶನಗಳಿಗೂ ಅರ್ಥ ಬರಲಾರದು. ಆಗ 14 ದಿನಗಳಲ್ಲಿ 32 ಮಸೂದೆಗಳನ್ನು ಮಂಡಿಸಿ ಅಂಗೀಕರಿಸುವ ಆತುರ ಮಾತ್ರವೇ ಕಾಣುತ್ತದೆ. ಅದರ ಬದಲಾಗಿ, ಉತ್ತಮ ಕಾನೂನ ನ್ನು ಜನರಿಗಾಗಿ ಕೊಡುವ ತಾಳ್ಮೆ ಮತ್ತು ಗಾಂಭೀರ್ಯ ಅತ್ಯಗತ್ಯ. ಹಾಗಾಗದೇ ಹೋದಾಗ ಅಧಿವೇಶನದ ಹೆಸರಲ್ಲಿ ಜನರ ದುಡ್ಡು ಪೋಲಾಗುತ್ತಲೇ ಇರುತ್ತದೆ. ಅತ್ಯಂತ ಕಳಪೆ ಅಧಿವೇಶನಗಳ ಪಟ್ಟಿ ಮಾತ್ರವೇ ಬೆಳೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News