×
Ad

ದೇಶವೇ ಅಪಹಾಸ್ಯಕ್ಕೀಡಾಗಿತ್ತು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ತಮಿಳುನಾಡು ರಾಜ್ಯಪಾಲರ ಆಕ್ರೋಶ

Update: 2022-08-01 13:27 IST

ಕೊಚ್ಚಿ: ಹಿಂಸೆಗೆ ಶೂನ್ಯ ಸಹಿಷ್ಣುತೆ ಹೊಂದಿರುವ ಭಾರತದ ನಿಲುವನ್ನು ಪುನರುಚ್ಛರಿಸಿರುವ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ, 26/11 ಮುಂಬೈ ದಾಳಿ 2008ರಲ್ಲಿ ನಡೆದ ಕೆಲವೇ ತಿಂಗಳುಗಳಲ್ಲಿ ಪಾಕಿಸ್ತಾನದ ಜೊತೆಗೆ ಉಗ್ರವಾದಕ್ಕೆ ಸಂಬಂಧಿಸಿದ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಕಿಡಿಕಾರಿದ್ದಾರೆ.

ಕೊಚ್ಚಿಯಲ್ಲಿ ರವಿವಾರ "ಆಂತರಿಕ ಭದ್ರತೆಗೆ ಸಮಕಾಲೀನ ಸವಾಲುಗಳು" ಎಂಬ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

"26/11 ಮುಂಬೈ ಉಗ್ರ ದಾಳಿಗಳು ನಡೆದಾಗ ಇಡೀ ದೇಶ ಆಘಾತಗೊಂಡಿತ್ತು,. ಕೆಲವೇ ಕೆಲವು ಉಗ್ರರಿಂದಾಗಿ ದೇಶ ಬಹಳಷ್ಟು ನೋವನ್ನು ಅನುಭವಿಸಿತ್ತು. ಆದರೆ ಈ ದಾಳಿಗಳು ನಡೆದ 9 ತಿಂಗಳಲ್ಲಿಯೇ ಎರಡೂ ದೇಶಗಳು ಉಗ್ರವಾದದಿಂದ ಸಂತ್ರಸ್ತ ದೇಶಗಳು ಎಂಬ ಜಂಟಿ ಹೇಳಿಕೆಗೆ ಆಗಿನ ಭಾರತದ ಮತ್ತು ಪಾಕಿಸ್ತಾನ ಪ್ರಧಾನಿಗಳು ಸಹಿ ಹಾಕಿದ್ದರು" ಎಂದರು.

"ನಮಗೆ ಶ್ರತುಬೋಧ್ ಇದೆಯೇ? ಪಾಕಿಸ್ತಾನ ಒಂದು ಸ್ನೇಹಿತ ರಾಷ್ಟ್ರವೇ ಅಥವಾ ವೈರಿಯೇ? ಇದು ಸ್ಪಷ್ಟವಾಗಬೇಕಿದೆ. ನೀವು ನಡುವಿನ ಜಾಗದಲ್ಲಿರಲು ಬಯಸಿದರೆ ಆಗ ಗೊಂದಲವಿರುತ್ತದೆ" ಎಂದು ರಾಜ್ಯಪಾಲರು ಹೇಳಿದರು.

ಈಗಿನ ಕೇಂದ್ರ ಸರಕಾರ ನಡೆಸಿದ್ದ ಸರ್ಜಿಕಲ್ ದಾಳಿಯನ್ನು ಶ್ಲಾಘಿಸಿದ ಅವರು "ಪುಲ್ವಾಮ ದಾಳಿಯ ನಂತರ ನಾವು ಬಾಲಾಕೋಟ್‍ನಲ್ಲಿ ಪಾಕಿಸ್ತಾನಕ್ಕೆ ನಮ್ಮ ವಾಯುಬಲ ಬಳಸಿ ತಿರುಗೇಟು ನೀಡಿದೆವು. ನೀವು ಉಗ್ರವಾದದ ಕೃತ್ಯ ನಡೆಸಿದರೆ ನೀವು ಬೆಲೆ ತೆರಬೇಕೆಂಬ ಸಂದೇಶ ಅದಾಗಿತ್ತು" ಎಂದು ಹೇಳಿದರು.

"ಮನಮೋಹನ್ ಸಿಂಗ್ ಆಡಳಿತದಲ್ಲಿ ನಮ್ಮ ಆಂತರಿಕ ಭದ್ರತೆಗೆ ಮಾವೋವಾದಿ ಹಿಂಸಾಚಾರ ದೊಡ್ಡ ಸವಾಲಾಗಿತ್ತು. ಮಧ್ಯ ಭಾರತದ 185 ಜಿಲ್ಲೆಗಳಿಗೆ ಅದು ಹರಡಿತ್ತು. ಜನರು ಕೆಂಪು ಕಾರಿಡಾರ್ ಬಗ್ಗೆ ಮಾತನಾಡುತ್ತಿದ್ದರು.  ಪರಿಸ್ಥಿತಿ ಆತಂಕಕಾರಿಯಾಗಿತ್ತು. ಇಂದು ಈ ಮಾವೋವಾದಿಗಳು 8 ಜಿಲ್ಲೆಗಳಿಗಿಂತಲೂ ಕಡಿಮೆ ಪ್ರದೇಶದಲ್ಲಿ ಹರಡಿಕೊಂಡಿದ್ದಾರೆ" ಎಂದು ಅವರು ಹೇಳಿಕೊಂಡರು.

ಕಾಶ್ಮೀರದ ಬಗ್ಗೆ ಮಾತನಾಡಿದ ಅವರು "ಹಿಂಸೆಗೆ ಶೂನ್ಯ ಸಹಿಷ್ಣುತೆ ಇದೆ. ಇದು ಕಠೋರ ಎಂದು ಅನಿಸಿದರೂ ಬಂದೂಕು ಬಳಸುವವರನ್ನು ಬಂದೂಕಿನಿಂದಲೇ ನಿಭಾಯಿಸಬೇಕು. ದೇಶದ ಏಕತೆ ಮತ್ತು ಸಮಗ್ರತೆಯ ವಿರುದ್ಧ ಮಾತನಾಡುವವರ ವಿರುದ್ಧ ಸಂಧಾನವಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಶರಣಾಗತಿಗೆ ಹೊರತುಪಡಿಸಿ ಯಾವುದೇ ತೀವ್ರಗಾಮಿ ಗುಂಪಿನೊಂದಿಗೆ ಮಾತುಕತೆಗಳನ್ನು ನಡೆದಿಲ್ಲ" ಎಂದು ರಾಜ್ಯಪಾಲರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News