×
Ad

ಉತ್ತರಪ್ರದೇಶದಲ್ಲಿ ಮತ್ತೊಂದು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ: ವರುಣ್ ಗಾಂಧಿ ವಾಗ್ದಾಳಿ

Update: 2022-08-01 13:27 IST
Photo:PTI

ಲಕ್ನೊ: ಉತ್ತರಪ್ರದೇಶ ರಾಜ್ಯದಲ್ಲಿ ಉತ್ತರ ಪ್ರದೇಶ ಸರಕಾರ ನಡೆಸಿದ ಮತ್ತೊಂದು ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ವಿರೋಧ ಪಕ್ಷಗಳು ಮಾತ್ರವಲ್ಲದೆ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಟೀಕೆ ಹಾಗೂ  ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ರಾಜ್ಯದ ಕಂದಾಯ ಇಲಾಖೆಯಲ್ಲಿ 'ಲೇಖಪಾಲ್'ಗಳ ನೇಮಕಾತಿ ಅಭಿಯಾನದ ವೇಳೆ ಬ್ಲೂಟೂತ್ ಸಾಧನಗಳ ಮೂಲಕ ಪರೀಕ್ಷಾರ್ಥಿಗಳಿಗೆ ವಂಚನೆ ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ವಿವಿಧ ಜಿಲ್ಲೆಗಳಿಂದ ಕನಿಷ್ಠ 21 ಜನರನ್ನು ರವಿವಾರ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.

ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ರವಿವಾರ ಸುಮಾರು 500 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

"ಯುಪಿ ಪೊಲೀಸ್‌, ಯುಪಿಪಿಸಿಎಲ್, ಯುಪಿಎಸ್‌ಸಿ, ಕೊಳವೆ ಬಾವಿ ಆಪರೇಟರ್, ಪಿಇಟಿ, ಯುಪಿಟಿಇಟಿ, ಬಿ.ಇಡಿ. , ನೀಟ್ ಪರೀಕ್ಷೆಗಳ ಪೇಪರ್ ಲೀಕ್ ಬಳಿಕ, 'ಲೇಖಪಾಲ್' ಪರೀಕ್ಷೆಗಳಲ್ಲಿಯೂ ನಕಲು ಮಾಫಿಯಾ ಪ್ರಾಬಲ್ಯ ಸಾಧಿಸಿದೆ. ಎಲ್ಲಿಯವರೆಗೆ ಈ ಸಂಘಟಿತ ಶಿಕ್ಷಣ ಮಾಫಿಯಾ ನಮ್ಮ ಯುವಕರ ಭವಿಷ್ಯದ ಜೊತೆ ಆಟವಾಡುತ್ತದೆ. ಇದು ಅತ್ಯಂತ ದುರದೃಷ್ಟಕರ" ಎಂದು ವರುಣ್ ಗಾಂಧಿ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ

ವರುಣ್ ಗಾಂಧಿ ಅವರು ಉತ್ತರ ಪ್ರದೇಶದ ಪಿಲಿಭಿತ್‌ನಿಂದ ಲೋಕಸಭಾ ಸಂಸದರಾಗಿದ್ದಾರೆ. ಕಳೆದ ವರ್ಷದಲ್ಲಿ, ಅವರು ಸರಕಾರದ ನೀತಿಯನ್ನು ವಿಶೇಷವಾಗಿ ಯುವಕರು ಮತ್ತು ಉದ್ಯೋಗಗಳ ಕುರಿತು ಪ್ರಶ್ನಿಸುವ ಅನೇಕ ಟ್ವೀಟ್‌ಗಳನ್ನು ಮಾಡಿದ್ದಾರೆ.

ಇತ್ತೀಚಿನ ಟ್ವೀಟ್‌ನಲ್ಲಿ ವರುಣ್  ಗಾಂಧಿ ಅವರು ಪ್ರಯಾಗ್‌ರಾಜ್‌ನ ಪರೀಕ್ಷಾ ಕೇಂದ್ರದಿಂದ ವರದಿಯಾಗಿರುವ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಪರೀಕ್ಷೆಗೆ ಹಾಜರಾಗಿದ್ದವರು ಪ್ರಶ್ನೆ ಪತ್ರಿಕೆಯ ಸೋರಿಕೆಯ ಆರೋಪದ ಮೇಲೆ ಗದ್ದಲವನ್ನು ಸೃಷ್ಟಿಸಿದ್ದರು.

ವರುಣ್ ಹಂಚಿಕೊಂಡ ವಿಡಿಯೋವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ  ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ರವಿವಾರ ಸಂಜೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

"ಲೇಖ್‌ಪಾಲ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಇಂದು ಸೋರಿಕೆಯಾಗಿದೆ. ಇದು ಬಿಜೆಪಿ ಸರಕಾರದ ತಂತ್ರವಾಗಿದೆ.  ಇದರಿಂದಾಗಿ ಯಾವುದೇ ನೇಮಕಾತಿ ಪರೀಕ್ಷೆ ಪೂರ್ಣವಾಗಬಾರದು ಹಾಗೂ  ಯಾರಿಗೂ ಕೆಲಸ ಸಿಗಬಾರದು ಎಂದು ವಿದ್ಯಾರ್ಥಿಗಳು ಸರಿಯಾದ ಆರೋಪಗಳನ್ನು ಮಾಡುತ್ತಿರುವಂತೆ ತೋರುತ್ತಿದೆ.  ಬಿಜೆಪಿ ಸಂಬಳ ಹಾಗೂ  ಪಿಂಚಣಿಗೆ ವಿರುದ್ಧವಾಗಿದೆ’’ ಎಂದು ಅಖಿಲೇಶ್ ಯಾದವ್ ಟ್ವೀಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News