ಭಾರತಕ್ಕೆ ಸೋಲು; ಟಿ-20 ಕ್ರಿಕೆಟ್ ಸಮಬಲ ಸಾಧಿಸಿದ ವೆಸ್ಟ್ ಇಂಡೀಸ್
ಬೆಸೆಟ್ಟೆರ್ (ಸೆಂಟ್ ಕಿಟ್ಸ್): ಎಡಗೈ ವೇಗದ ಬೌಲರ್ ಒಬೆಡ್ ಮೆಕಾಯ್ ಮಾರಕ ದಾಳಿ (17ಕ್ಕೆ 6 ವಿಕೆಟ್)ಗೆ ತತ್ತರಿಸಿದ ಭಾರತ ಟಿ-20 ಕ್ರಿಕೆಟ್ ತಂಡ, ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ 5 ವಿಕೆಟ್‍ಗಳ ಸೋಲು ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ವೆಸ್ಟ್ ಇಂಡೀಸ್ ಇದೀಗ ಸರಣಿ ಸಮಬಲ ಸಾಧಿಸಿದೆ.
ಮೆಕಾಯ್ ಎರಡು ಸ್ಪೆಲ್‍ಗಳ ಅದ್ಭುತ ದಾಳಿಯಲ್ಲಿ, ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಸ್ಟಾರ್ ಬ್ಯಾಟ್ಸ್ ಮನ್‍ಗಳಿಂದ ಕೂಡಿದ್ದ ಭಾರತ ತಂಡ ಕೇವಲ 19.4 ಓವರ್‍ಗಳಲ್ಲಿ 138 ರನ್‍ಗಳಿಗೆ ಆಲೌಟ್ ಆಯಿತು. ಇದು ಅಂತರರಾಷ್ಟ್ರೀಯ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಟಗಾರದ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಇದಕ್ಕೂ ಮುನ್ನ ಕೆ.ಪೌಲ್, ಡೆರೆನ್ ಸಾಮಿ, ಜೇಸನ್ ಹೋಲ್ಡರ್ ಮತ್ತು ಓ.ಥಾಮಸ್ ಪಂದ್ಯವೊಂದಲ್ಲಿ ತಲಾ 5 ವಿಕೆಟ್ ಗಳಿಸಿದ್ದರು.
ಸುಲಭ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಪರವಾಗಿ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ 52 ಎಸೆತಗಳಲ್ಲಿ 68 ರನ್ ಸಿಡಿಸಿದರು. ಆವೇಶ್ ಖಾನ್ ಎಸೆತದಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ದೆವೋನ್ ಥಾಮಸ್ (19 ಎಸೆತಗಳಲ್ಲಿ 31) ಗೆಲುವಿನ ಔಪಚಾರಿಕತೆ ಮುಗಿಸಿದರು.
ಮೊದಲ ಸ್ಪೆಲ್‍ನಲ್ಲಿ ರೋಹಿತ್ ಶರ್ಮಾ (0), ಸೂರ್ಯಕುಮಾರ್ ಯಾದವ್ (11) ಅವರ ವಿಕೆಟ್ ಪಡೆದ ಮೆಕಾಯ್ ಎರಡನೇ ಸ್ಪೆಲ್‍ನಲ್ಲಿ ಮಾರಕ ಎನಿಸಿ, ರವೀಂದ್ರ ಜಡೇಜಾ (27), ಕಾರ್ತಿಕ್ (7), ಅಶ್ವಿನ್ (6) ಮತ್ತು ಭುವನೇಶ್ವರ್ ಕುಮಾರ್ (1) ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು.