ನ್ಯಾಷನಲ್ ಹೆರಾಲ್ಡ್ ಪ್ರಕರಣ: ಪತ್ರಿಕೆ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ ಶೋಧ
ಹೊಸದಿಲ್ಲಿ, ಆ.2: ‘ನ್ಯಾಶನಲ್ ಹೆರಾಲ್ಡ್’ ದೈನಿಕಕ್ಕೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ವಿಚಾರಣೆಯನ್ನು ನಡೆಸಿದ ಕೆಲವೇ ದಿನಗಳ ಆನಂತರ ಜಾರಿ ನಿರ್ದೇಶನಾಲಯವುದಿಲ್ಲಿಯಲ್ಲಿರುವ ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯ ಕಚೇರಿಗಳು ಸೇರಿದಂತೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ನ 12 ಸ್ಥಳಗಳ ಮೇಲೆ ತನಿಖಾ ಏಜೆನ್ಸಿ ದಾಳಿ ನಡೆಸಿದೆ. ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯ ಒಡೆತನವನ್ನು ಎಜೆಎಲ್ ಹೊಂದಿದೆ. ಶೋಧ ಕಾರ್ಯಾಚರಣೆಯ ಬಳಿಕ ಈ ಹಗರಣಕ್ಕೆ ಸಂಬಂಧಿಸಿದ ಸೊತ್ತುಗಳನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕುವ ಸಾಧ್ಯತೆಯಿದೆ.
ಈ ಮಧ್ಯೆ ಜಾರಿ ನಿರ್ದೇಶನಾಲಯದ ಕಾರ್ಯಾಚರಣೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ. ಹಣದುಬ್ಬರ ಹಾಗ ನಿರುದ್ಯೋಗದಂತಹ ನಿರ್ಣಾಯಕ ವಿಷಯಗಳ ಕುರಿತಂತೆ ಪ್ರತಿಪಕ್ಷಗಳು ಕೇಳಿರುವ ಪ್ರಶ್ನೆಗಳು ಕೇಂದ್ರ ಸರಕಾರವನ್ನು ಬೆಚ್ಚಿಬೀಳಿಸಿದೆ ಎಂದು ಅದು ಕುಟುಕಿದೆ. ದೇಶದ ಜನತೆಗೆ ಈ ವಿಷಯಗಳ ಬಗ್ಗೆ ಉತ್ತರಿಸಲು ಅವರಿಗೆ (ಸರಕಾರ) ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿತಕರವಲ್ಲದ ಪ್ರಶ್ನೆಗಳನ್ನು ಕೇಳುತ್ತಿರುವವರನ್ನು ಅಪಮಾನಗೊಳಿಸುತ್ತಿದ್ದಾರೆ ಹಾಗೂ ಬ್ಲಾಕ್ಮೇಲ್ಗೊಳಿಸಲು ಯತ್ನಿಸುತ್ತಿದ್ದಾ ಎಂದು ಅದು ಹೇಳಿದೆ.
‘‘ಕೇವಲ ಕಾಂಗ್ರೆಸ್ಗೆ ಮಾತ್ರವಲ್ಲ.ಇತರ ಹಲವು ಪ್ರತಿಪಕ್ಷಗಳಿಗೂ ಸರಕಾರ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಸೈಯದ್ ನಾಸೀರ್ ಹುಸೇನ್ ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಯಾವತ್ತೂ ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ ’’ ಎಂದರು.
ಬಹಾದೂರ್ ಶಾ ಝಫರ್ ಮಾರ್ಗ್ನಲ್ಲಿರುವ ಹೆರಾಲ್ಞ್ ಹೌಸ್ ಕಾರ್ಯಾಲಯದ ಮೇಲೆ ಈ.ಡಿ.ನಡೆಸಿದ ದಾಳಿಯು ಭಾರತದ ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ನ ಮೇಲೆ ಮುಂದುವರಿದ ದಾಳಿಯ ಒಂದು ಭಾಗವಾಗಿದೆ ಎಂದವರು ಹೇಳಿದರು.
ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಜಾರಿ ನಿರ್ದೇಶನಾಲಯವ ಮೂರು ದಿನಗಳ ಲ್ಲಿ 12 ತಾಸುಗಳ ಕಾಲ ಸೋನಿಯಾ ಅವರನ್ನು ಪ್ರಶ್ನಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪುತ್ರ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಐದು ದಿನಗಳ ಕಾಲ ಪ್ರಶ್ನಿಸಿದ್ದು, 150ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿತ್ತು.
ದಿಲ್ಲಿ ಸಹಿತ ದೇಶದ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ
ಹೊಸದಿಲ್ಲಿ,ಆ.2: ಇಲ್ಲಿನ ನ್ಯಾಶನಲ್ ಹೆರಾಲ್ಡ್ ದೈನಿಕದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ನ್ಯಾಶನಲ್ ಹೆರಾಲ್ಡ್ ಕಾರ್ಯಾಲಯದ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಿಡಿದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನ್ಯಾಶನಲ್ ಹೆರಾಲ್ಡ್ ದೈನಿಕಕ್ಕೆ ಸಂಬಂದಿಸಿದ ಕಪ್ಪುಹಣ ಬಿಳುಪು ಪ್ರಕರಣದ ಕುರಿತಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ ಕೆಲವೇ ದಿನಗಳ ಬಳಿಕ ಜಾರಿ ನಿರ್ದೇಶನಾಯ ಈ ದಾಳಿ ನಡೆಸಿದೆ.
ಇ.ಡಿ. ದಾಳಿಯನ್ನು ವಿರೋಧಿಸಿ ಹಾಗೂ ಪಕ್ಷದ ಪ್ರಮುಖ ನಾಯಕರನ್ನು ವಿಚಾರಣೆಗೊಳಪಡಿಸಿರುವುದನ್ನು ವಿರೋಧಿಸಿ ರಾಜಧಾನಿ ಹೊಸದಿಲ್ಲಿ ಹಾಗೂ ದೇಶದ ವಿವಿಧೆಡೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನೆಗಳನ್ನು ನಡೆಸಿದರು. ನ್ಯಾಶನಲ್ ಹೆರಾಲ್ಡ್ ಪ್ರಕರಣವು ರಾಜಕೀಯ ಪ್ರೇರಿತವಾದುದು ಹಾಗೂ ಕೇಂದ್ರ ಸರಕಾರವು ರಾಜಕೀಯ ಸೇಡು ತೀರಿಸಿಕೊಳ್ಳಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದವರು ಆರೋಪಿಸಿದರು.