ಕಾನೂನು ಬಾಹಿರ ದತ್ತು ಸ್ವೀಕಾರ: ದಂಪತಿ ವಿರುದ್ಧ ಪ್ರಕರಣ ದಾಖಲು

Update: 2022-08-02 16:17 GMT

ಗಂಗೊಳ್ಳಿ, ಆ.2: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದು ಸಾಕುತ್ತಿದ್ದ ದಂಪತಿಯ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ ಗ್ರಾಮದ ಗುಡ್ಡೆಕೇರಿ ನಿವಾಸಿ ಶ್ರೀಧರ್ ಹಾಗೂ ರಾಜೇಶ್ವರಿ ದಂಪತಿ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿರುವ ಬಗ್ಗೆ ಬಂದ ಮಾಹಿತಿ ಯಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ ದೇವಾಡಿಗ  ಜು.26ರಂದು ಶ್ರೀಧರ್ ಮನೆಗೆ ಭೇಟಿ ನೀಡಿ ವಿಚಾರಿಸಿದರು.

ಈ ದಂಪತಿ ಜು.16ರಂದು 9 ತಿಂಗಳಿನ ಹೆಣ್ಣು ಮಗುವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಯಾವುದೇ ದಾಖಲೆಗಳಿಲ್ಲದೇ ಅನಧಿಕೃತವಾಗಿ ತಂದು ಸಾಕುತ್ತಿರುವುದಾಗಿ ತಿಳಿದುಬಂದಿದೆ. ಮಗುವನ್ನು ಯಾರಿಂದ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡಿರುವುದಿಲ್ಲ.

ಮಗುವಿನ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರ ಮೌಖಿಕ ಆದೇಶದ ಮೇರೆಗೆ ಸಂತೆಕಟ್ಟೆಯ ಕೃಷ್ಣಾನುಗ್ರಹ ಅರ್ಹ ದತ್ತು ಸಂಸ್ಥೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಆರೋಪಿ ದಂಪತಿಗೆ ಮಗುವಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗುವಂತೆ ತಿಳಿಸಿದ್ದು ಅವರು ಈವೆರೆಗೂ ಮಗುವಿನ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ಆದುದರಿಂದ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಕ್ಷಣಾಧಿಕಾರಿ ಮಹೇಶ ದೇವಾಡಿಗ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News