ತೈವಾನ್ ನ 35 ರಫ್ತು ಸಂಸ್ಥೆಗಳನ್ನು ನಿಷೇಧಿಸಿದ ಚೀನಾ

Update: 2022-08-02 17:10 GMT

ಹಾಂಕಾಂಗ್, ಆ.2: ಬಿಸ್ಕಿಟ್ ಮತ್ತು ಸಿಹಿತಿಂಡಿಗಳನ್ನು ರಫ್ತು ಮಾಡುವ ತೈವಾನ್ನ 35 ಸಂಸ್ಥೆಗಳ ಉತ್ಪನ್ನಗಳನ್ನು ಆಮದು ಮಾಡುವುದಕ್ಕೆ ಸೋಮವಾರದಿಂದ ನಿಷೇಧಿಸಿರುವುದಾಗಿ ಚೀನಾ ಘೋಷಿಸಿದೆ. ಈ ಮೂಲಕ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿಯ ಸಂಭಾವ್ಯ ತೈವಾನ್ ಭೇಟಿಗೂ ಮುನ್ನ ಆ ದೇಶಕ್ಕೆ ಕಠಿಣ ಸಂದೇಶ ಮತ್ತು ಎಚ್ಚರಿಕೆಯನ್ನು ರವಾನಿಸಿದೆ.

ಚೀನಾದ ಕಸ್ಟಮ್ಸ್ ಇಲಾಖೆಯಡಿ ‘ಆಹಾರ ವಸ್ತು’ ವಿಭಾಗದಲ್ಲಿ ನೋಂದಾವಣೆಗೊಂಡಿರುವ 3,200 ತೈವಾನ್ ಸಂಸ್ಥೆಗಳಲ್ಲಿ 2,006 ಸಂಸ್ಥೆಗಳನ್ನು ಆಮದು ಅಮಾನತು ಎಂಬ ಪಟ್ಟಿಯಡಿ ಸೇರಿಸಲಾಗಿದೆ ಎಂದು ತೈವಾನ್ನ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಬಿಸ್ಕಿಟ್, ಬ್ರೆಡ್ ಮತ್ತು ಸಿಹಿತಿಂಡಿಗಳ ಗುಂಪಿನಲ್ಲಿ ಸೇರಿರುವ 107 ಸಂಸ್ಥೆಗಳಲ್ಲಿ 35 ಅನ್ನು ಆಮದು ಅಮಾನತು ಗುಂಪಿನಡಿ ಸೇರಿಸಲಾಗಿದೆ ಎಂದು ಚೀನಾದ ಕಸ್ಟಮ್ಸ್ ವ್ಯವಸ್ಥಾಪಕ ಕಚೇರಿಯ ವೆಬ್ಸೈಟ್ನ ಮಾಹಿತಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ತೈವಾನ್ನಿಂದ ಚೀನಾಕ್ಕೆ ಅತೀ ಹೆಚ್ಚು ರಫ್ತಾಗುವ ವಸ್ತುಗಳಲ್ಲಿ ಇಲೆಕ್ಟ್ರಾನಿಕ್ಸ್, ಬಿಡಿಭಾಗಗಳು, ಯಂತ್ರೋಪಕರಣ, ಪ್ಲಾಸ್ಟಿಕ್ ಹಾಗೂ ರಾಸಾಯನಿಕಗಳು ಸೇರಿದೆ. ತೈವಾನ್ನಿಂದ ಮೀನು, ಅನಾನಸು, ಸೇಬು ಮುಂತಾದವುಗಳಲ್ಲಿ ಕೀಟಗಳಿರುವ ಕಾರಣ ಅವನ್ನು ನಿಷೇಧಿಸುವುದಾಗಿ ಚೀನಾ ಕಳೆದ ವರ್ಷ ಘೋಷಿಸಿತ್ತು. ಆದರೆ ಈ ಹೇಳಿಕೆಯನ್ನು ತೈವಾನ್ ನಿರಾಕರಿಸಿದೆ. ಚೀನಾದ ಅಲ್ಪಾವಧಿಯ ಅಮಾನತು ಕ್ರಮದಿಂದ ಸಮಸ್ಯೆಗೆ ಒಳಗಾಗಿರುವ ಸಂಸ್ಥೆಗಳಿಗೆ ನೆರವಾಗಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತೈವಾನ್ನ ಕೃಷಿ ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News