ವಾಯುದಾಳಿ ಆಶ್ರಯ ಕೇಂದ್ರ ಸಜ್ಜುಗೊಳಿಸಿದ ತೈವಾನ್

Update: 2022-08-02 17:12 GMT

ತೈಪೆ, ಆ.2: ಚೀನಾದೊಂದಿಗಿನ ಉದ್ವಿಗ್ನತೆ ಪರಾಕಾಷ್ಟೆಯ ಹಂತ ತಲುಪಿರುವಂತೆಯೇ, ಚೀನಾದ ಸಂಭಾವ್ಯ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ತೈವಾನ್ ತನ್ನ ವಾಯುದಾಳಿ ಆಶ್ರಯ ಕೇಂದ್ರಗಳನ್ನು ಸಜ್ಜುಗೊಳಿಸುತ್ತಿದೆ ಎಂದು ವರದಿಯಾಗಿದೆ.

ತೈವಾನ್ ತನ್ನ ಭೌಗೋಳಿಕ ವ್ಯಾಪ್ತಿಯಲ್ಲಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ, ತೈವಾನ್ ಸುತ್ತಮುತ್ತ ನೌಕಾ ಮತ್ತು ವಾಯುಕ್ಷೇತ್ರದ ಚಟುವಟಿಕೆಯನ್ನು ಹೆಚ್ಚಿಸಿದೆ. ತನ್ನನ್ನು ರಕ್ಷಿಸಿಕೊಳ್ಳಲು ಬದ್ಧ ಎಂದು ಹೇಳಿರುವ ತೈವಾನ್, ನಿರಂತರ ಮಿಲಿಟರಿ ಮತ್ತು ನಾಗರಿಕ ರಕ್ಷಣಾ ಕವಾಯತುಗಳನ್ನು ನಡೆಸುತ್ತಿದೆ.

ಚೀನಾ ಕ್ಷಿಪಣಿ ದಾಳಿ ನಡೆಸಿದರೆ ಆಗ ಜನರು ಆಶ್ರಯ ಪಡೆಯಲು ಈ ಶೆಲ್ಟರ್ಗಳು ನೆರವಾಗುತ್ತದೆ. ಇವು ಮಿಲಿಟರಿ ರೀತಿಯ ಬಂಕರ್ಗಳಲ್ಲ, ಆದರೆ ಕಾರ್ ಪಾರ್ಕ್, ಸುರಂಗ ಮಾರ್ಗ , ಭೂಗತ ಶಾಪಿಂಗ್ ಕೇಂದ್ರಗಳ ರೀತಿಯ ನೆಲದಡಿಯ ವ್ಯವಸ್ಥೆಗಳಾಗಿವೆ. ರಾಜಧಾನಿ ತೈಪೆಯಲ್ಲಿ ಈ ರೀತಿಯ ಸುಮಾರು 4,600 ಆಶ್ರಯ ತಾಣಗಳಿದ್ದು 12 ಮಿಲಿಯನ್ಗೂ ಅಧಿಕ ಜನರು ಇದರೊಳಗೆ ಸುರಕ್ಷಿತವಾಗಿ ಇರಬಹುದು. ನಿಯೋಜಿತ ಶೆಲ್ಟರ್ಗಳ ಮಾಹಿತಿ ಕೋಶವನ್ನು ತೈವಾನ್ ಅಧಿಕಾರಿಗಳು ಪರಿಷ್ಕರಿಸುತ್ತಿದ್ದಾರೆ. ಸ್ಮಾರ್ಟ್ಪೋನ್ ಆ್ಯಪ್ ಮೂಲಕ ಜನತೆ ಈ ಬಗ್ಗೆ ಮಾಹಿತಿ ಪಡೆದು ಸಮೀಪದ ಆಶ್ರಯ ತಾಣದತ್ತ ತೆರಳಬಹುದಾಗಿದೆ.

ಈ ಬಗ್ಗೆ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲೂ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಶೆಲ್ಟರ್ ಕೇಂದ್ರಗಳ ಪ್ರವೇಶ ದ್ವಾರಕ್ಕೆ ಹಳದಿ ಬಣ್ಣದ ಲೇಬಲ್ ಅಂಟಿಸಲಾಗುವುದು. ಆಯಾ ಕೇಂದ್ರದಲ್ಲಿ ಎಷ್ಟು ಮಂದಿ ತಂಗಲು ವ್ಯವಸ್ಥೆಯಿದೆ ಎಂಬ ಮಾಹಿತಿ ಅದರಲ್ಲಿ ಇರುತ್ತದೆ. ಯುರೋಪ್ನಲ್ಲಿ ಸಂಭವಿಸುತ್ತಿರುವ ಘಟನೆಗಳಿಂದ ನಮಗೆ ಯುದ್ಧ ತಂದೊಡ್ಡುವ ಪರಿಸ್ಥಿತಿಯ ಅರಿವಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯುದ್ಧ ಎಷ್ಟು ದಿನ ಮುಂದುವರಿಯಬಹುದು ಅಥವಾ ಅದರಿಂದ ಅಮಾಯಕ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದು ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದ್ದರಿಂದಲೇ ಜನತೆಗೆ ಸುರಕ್ಷತೆಯ ಶೆಲ್ಟರ್ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News