ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್: ಭಾರತಕ್ಕೆ ಸರಣಿ ಮುನ್ನಡೆ‌

Update: 2022-08-03 01:51 GMT
(ಫೋಟೊ - twitter.com)

ಬಸ್ಸೆಟೆರ್ರೆ (ಸೆಂಟ್ ಕೀಟ್ಸ್ & ನೆವೀಸ್): ಸೂರ್ಯಕುಮಾರ್ ಯಾದವ್ (76) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ, ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ ಮೂರನೇ ಪಂದ್ಯದಲ್ಲಿ 7 ವಿಕೆಟ್‍ಗಳ ಸುಲಭ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಕೊನೆಯ ಎರಡು ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿವೆ.‌

ಇಲ್ಲಿನ ವಾರ್ನೆರ್ ಪಾರ್ಕ್ ಕ್ರೀಡಾಂಗಣದಲ್ಲಿ 147ಕ್ಕಿಂತ ಹೆಚ್ಚು ರನ್ ಬೆನ್ನಟ್ಟಿ ಗೆದ್ದ ನಿದರ್ಶನ ಇರಲಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಈ ದಾಖಲೆಯನ್ನು ಅಳಿಸಿ ಹಾಕುವ ನಿರ್ಧಾರವನ್ನು ಆರಂಭದಿಂದಲೇ ಕಾರ್ಯಗತಗೊಳಿಸಿ 44 ಎಸೆತಗಳಲ್ಲಿ 76 ರನ್ ಸಿಡಿಸಿ ಗೆಲುವಿನ ರೂವಾರಿ ಎನಿಸಿದರು. 165 ರನ್‍ಗಳ ಗುರಿಯನ್ನು ಕೇವಲ 19 ಓವರ್‌ ಗಳಲ್ಲಿ ಭಾರತ ತಲುಪಿತು.

ಕ್ರೀಸ್‍ನ ಇನ್ನೊಂದು ತುದಿಯಲ್ಲಿ ಶ್ರೇಯಸ್ ಅಯ್ಯರ್ (26 ಎಸೆತಗಳಲ್ಲಿ 24) ಸಾಥ್ ನೀಡಿ 86 ರನ್‍ಗಳ ಜತೆಯಾಟಕ್ಕೆ ಕಾರಣರಾದರು. ಇದು ಬ್ಯಾಟಿಂಗ್ ಸ್ನೇಹಿ ಅಲ್ಲದ ಪಿಚ್‍ನಲ್ಲಿ ಭಾರತದ ಗೆಲುವಿನ ಗುರಿಯನ್ನು ಸುಲಭಗೊಳಿಸಿತು. ಯಾದವ್ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದರು. ಮೊದಲ ಹತ್ತು ಓವರ್‍ಗಳಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೇ 96 ರನ್ ಗಳಿಸಿತ್ತು. ಅದರೆ ಇದಕ್ಕೂ ಮುನ್ನ ನಾಯಕ ರೋಹಿತ ಶರ್ಮಾ (11) ಸ್ನಾಯುಸೆಳೆತದಿಂದಾಗಿ ನಿವೃತ್ತರಾಗಿದ್ದರು.

ಸೂರ್ಯಕುಮಾರ್ ಯಾದವ್ ಔಟ್ ಆಗುವ ವೇಳೆಗೆ ಪಂದ್ಯ ಸಂಪೂರ್ಣ ಭಾರತದ ಹಿಡಿತದಲ್ಲಿತ್ತು. ರಿಷಭ್ ಪಂತ್ (26 ಎಸೆತಗಳಲ್ಲಿ 33) ಫಿನಿಶಿಂಗ್ ಟಚ್ ನೀಡಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ಶಿಸ್ತಿನ ಬೌಲಿಂಗ್‍ನಿಂದ ಗಮನ ಸೆಳೆದರೂ,‌ ವೆಸ್ಟ್ ಇಂಡೀಸ್ ತಂಡ 5 ವಿಕೆಟ್ ನಷ್ಟಕ್ಕೆ 164 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News