ಕರ್ನಾಟಕ, ಕೇರಳದಲ್ಲಿ ವ್ಯಾಪಕ ಮಳೆ: 13 ಮಂದಿ ಮೃತ್ಯು

Update: 2022-08-03 02:53 GMT

ಬೆಂಗಳೂರು/ತಿರುವನಂಪುರ: ಕರ್ನಾಟಕ ಹಾಗೂ ಕೇರಳದ ಹಲವು ಜಿಲ್ಲೆಗಳಲ್ಲಿ ಸೋಮವಾರ ಹಾಗೂ ಮಂಗಳವಾರ ವ್ಯಾಪಕ ಮಳೆಯಾಗಿದ್ದು, ಮಳೆ ಸಂಬಂಧಿ ಅನಾಹುತಗಳಿಗೆ ಕರ್ನಾಟಕದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಬಲಿಯಾಗಿದ್ದಾರೆ. ಕೇರಳದಲ್ಲಿ ಆರು ಮಂದಿ ಬಲಿಯಾಗಿದ್ದಾರೆ.

ಹಲವು ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗಿದ್ದು, ರೈಲು ಸಂಪರ್ಕ ಕಡಿತಗೊಂಡಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೇರಳದಲ್ಲಿ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಹಾಗೂ ಕಾಸರಗೋಡು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೇರಳದಲ್ಲಿ ಜುಲೈ 31ರಿಂದೀಚೆಗೆ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾದವರ ಸಂಖ್ಯೆ 12ಕ್ಕೇರಿದೆ ಎಂದು ಕೇರಳ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಹೇಳಿದೆ. ವಿವಿಧ ಕಡೆಗಳಲ್ಲಿ ಮೂವರು ನಾಪತ್ತೆಯಾಗಿದ್ದಾರೆ. 126 ಮನೆಗಳು ಹಾನಿಗೀಡಾಗಿದ್ದು, 27 ಮನೆಗಳು ಸಂಪೂರ್ಣ ಕುಸಿದಿವೆ ಎಂದು ಹೇಳಿದೆ.

ರಾಜ್ಯದಲ್ಲಿ ಆರು ಮಂದಿ ಭೂಕುಸಿತದಿಂದ ಮೃತಪಟ್ಟಿದ್ದು, ಸೋಮವಾರ ಓರ್ವ ಮನೆ ಕುಸಿತದ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಹೇಳಿದ್ದಾರೆ.

ಭಟ್ಕಳ ತಾಲೂಕಿನ ಮುಟ್ಟಳ್ಳಿ ದುರಂತದಲ್ಲಿ ಮನೆಯೊಂದರ ಮೇಲೆ ಭಾಗಶಃ ಗುಡ್ಡ ಕುಸಿದಿದ್ದು, ಒಂದೇ ಕುಟುಂಬದ ನಾಲ್ಕು ಮಂದಿ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಲೂಕಿನ ಸುಬ್ರಹ್ಮಣ್ಯ ಪಟ್ಟಣದಲ್ಲಿ ನಡೆದ ಇನ್ನೊಂದು ಮನೆಯ ಮೇಲೆ ಗುಡ್ಡ ಕುಸಿದು ಇಬ್ಬರು ಸಹೋದರಿಯರು ಜೀವ ಕಳೆದುಕೊಂಡಿದ್ದಾರೆ. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಶ್ರುತಿ (11) ಮತ್ತು ಜ್ಞಾನಶ್ರೀ (6) ಅವರ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ವಿವರ ನೀಡಿದ್ದಾರೆ.

ಮಳೆ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವೀಡಿಯೊ ಕಾನ್ಫರೆನ್ಸ್ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News