ಆಂಧ್ರ: ಉಡುಪು ತಯಾರಿಕಾ ಘಟಕದಲ್ಲಿ ಗ್ಯಾಸ್ ಸೋರಿಕೆ: 87 ಮಂದಿ ಆಸ್ಪತ್ರೆಗೆ ದಾಖಲು
ವಿಶಾಖಪಟ್ಟಣ: ಆಂಧ್ರಪ್ರದೇಶದ ಅಚ್ಯುತಪುರಂ ಜಿಲ್ಲೆಯ ಬ್ರಾಂಡಿಕ್ಸ್ ವಿಶೇಷ ಆರ್ಥಿಕ ವಲಯ (ಸೆಝ್) ನಲ್ಲಿರುವ ಉಡುಪು ತಯಾರಿಕಾ ಘಟಕದಲ್ಲಿಮಂಗಳವಾರ ಅನಿಲ ಸೋರಿಕೆಯಾದ ನಂತರ 87 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯಾವುದೇ ಸಾವುನೋವಿನ ಕುರಿತು ಇನ್ನೂ ವರದಿಯಾಗಿಲ್ಲ. ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯು ಮಾದರಿಗಳನ್ನು ತೆಗೆದುಕೊಂಡಿದ್ದು, ಪರೀಕ್ಷೆಗಾಗಿ ಸಿಕಂದರಾಬಾದ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಗೆ (ಐಐಸಿಟಿ) ಕಳುಹಿಸಲಾಗುವುದು.
ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಮಾದರಿಗಳನ್ನು ಐಸಿಎಂಆರ್‌ಗೆ ಕಳುಹಿಸಲಾಗಿದೆ. ಇದು ಉದ್ದೇಶಪೂರ್ವಕ ಕೃತ್ಯವೇ ಎಂಬುದನ್ನು ನಿರ್ಧರಿಸಬೇಕಿದೆ ಎಂದು ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಗುಡಿವಾಡ ಅಮರನಾಥ್ ಹೇಳಿದ್ದಾರೆ.
ವಾಂತಿ ಮತ್ತು ವಾಕರಿಕೆಯಿಂದಾಗಿ ಮಹಿಳಾ ಉದ್ಯೋಗಿಗಳು ಪ್ರಜ್ಞಾಹೀನರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.