ಏಕನಾಥ್ ಶಿಂಧೆ ಗುಂಪು ಅಸ್ಸಾಂಗೆ ಹೋಗಿ ಬಿಜೆಪಿ ಮಡಿಲಲ್ಲಿ ಕುಳಿತಿತ್ತು: ಸುಪ್ರೀಂಗೆ ನೀಡಿದ ಉತ್ತರದಲ್ಲಿ ಉದ್ಧವ್ ತಂಡ

Update: 2022-08-03 06:58 GMT
ಉದ್ಧವ್ ಠಾಕ್ರೆ (PTI)

ಹೊಸದಿಲ್ಲಿ: ತಮ್ಮ ಪಕ್ಷ ವಿರೋಧಿ ನಿಲುವನ್ನು ಸಮರ್ಥಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ಗುಂಪು ಸುಳ್ಳು ವಿವರಣೆಯನ್ನು ಹಬ್ಬಲು ಯತ್ನಿಸುತ್ತಿದೆ ಎಂದು ಇಂದು ಪಕ್ಷದ ನಿಯಂತ್ರಣ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಮಹತ್ವದ ವಿಚಾರಣೆಯ ವೇಳೆ ತನ್ನ ಉತ್ತರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಗುಂಪು ಆರೋಪಿಸಿದೆ.

"ಶಿವಸೇನೆ ಮತ್ತು ಎನ್‍ಸಿಪಿ ಮೈತ್ರಿಕೂಟದಿಂದ ಮತದಾರರರಿಗೆ ಆಕ್ರೋಶವುಂಟಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ,'' ಎಂದು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾದ ಪ್ರತಿಕ್ರಿಯೆಯಲ್ಲಿ ಉದ್ಧವ್ ನೇತೃತ್ವದ ಗುಂಪು ಹೇಳಿದೆ. "ವಾಸ್ತವವಾಗಿ ಈ ಶಾಸಕರು ಮಹಾ ವಿಘಾಡಿ ಮೈತ್ರಿಕೂಟದ ಭಾಗವಾಗಿ ಎರಡೂವರೆ ವರ್ಷಗಳಿಂದ ಇದ್ದರು ಹಾಗೂ ಮೈತ್ರಿಕೂಟಕ್ಕೆ ಯಾವತ್ತೂ ವಿರೋಧ ವ್ಯಕ್ತಪಡಿಸಿರಲಿಲ್ಲ.'' ಎಂದು ಉದ್ಧವ್ ಗುಂಪು ಹೇಳಿದೆ.

"ತಮ್ಮ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮುಚ್ಚಿ ಹಾಕಲು ಅವರು ತಮ್ಮದೇ 'ನಿಜವಾದ ಸೇನೆ' ಎಂದು ಹೇಳಿಕೊಂಡು ಚುನಾವಣಾ ಆಯೋಗದ ಮುಂದೆ ಹೋಗಿದ್ದಾರೆ. ಅವರಿಗೆ ತಮ್ಮ ಪಕ್ಷದ ಬೆಂಬಲವಿದ್ದಿದ್ದೇ ಆದಲ್ಲಿ ಈ ಬಂಡಾಯ ಶಾಸಕರು ಮಹಾರಾಷ್ಟ್ರ ತೊರೆದು ಬಿಜೆಪಿ ಆಡಳಿತದ ಗುಜರಾತ್‍ಗೆ ತೆರಳಿ ನಂತರ ಅಸ್ಸಾಂನಲ್ಲಿ ಬಿಜೆಪಿಯ ತೊಡೆಯ ಮೇಲೆ ಕುಳಿತುಕೊಳ್ಳುವಂತಾಯಿತೇಕೆ? ಏಕೆಂದರೆ ಗುಜರಾತ್ ಮತ್ತು ಅಸ್ಸಾಂನಲ್ಲಿ ಶಿವಸೇನೆಯಿಲ್ಲ ಹಾಗೂ  ಅಲ್ಲಿ ಕೇವಲ ಬಿಜೆಪಿಯಿದೆ ಮತ್ತು ಅವರ ಪ್ರಯಾಣಕ್ಕಾಗಿ ಎಲ್ಲಾ ಬೆಂಬಲ ಒದಗಿಸಿತ್ತು,'' ಎಂದು ಉದ್ಧವ್ ನೇತೃತ್ವದ ಶಿವಸೇನೆ ಗುಂಪು ತನ್ನ ಉತ್ತರದಲ್ಲಿ ಹೇಳಿದೆ.

ಶಿಂಧೆ ಗುಂಪು ಬಿಜೆಪಿಯನ್ನು ಶಿವಸೇನೆಯ ಹಳೆಯ ಮಿತ್ರ ಎಂದು ಹೇಳಿಕೊಳ್ಳುತ್ತಿದೆ ಆದರೆ ಬಿಜೆಪಿ ಯಾವತ್ತೂ ಸೇನೆಗೆ ಸಮಾನ ಸ್ಥಾನಮಾನ ನೀಡಿಲ್ಲ, ಎಂದು ಸುಪ್ರೀಂ ಕೋರ್ಟಿಗೆ ನೀಡಿದ ಉತ್ತರದಲ್ಲಿ ಹೇಳಲಾಗಿದೆ.

ಠಾಕ್ರೆ ವಿರುದ್ಧ ಬಂಡಾಯ ಸಾರಿದ ಶಾಸಕರನ್ನು ಅನರ್ಹಗೊಳಿಸುವ ಕುರಿತಂತೆ  ನಿರ್ಧಾರ ಕೈಗೊಳ್ಳುವ ತನಕ ಪಕ್ಷದ ಮೇಲೆ ಯಾರು ಹಿಡಿತ ಹೊಂದಿದ್ದಾರೆಂಬುದನ್ನು ಚುನಾವಣಾ ಆಯೋಗವು ನಿರ್ಧರಿಸುವುದಕ್ಕೆ ತಡೆ ಹೇರಬೇಕೆಂದು ಠಾಕ್ರೆ ತಂಡ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News