ಅಲ್ಪಸಂಖ್ಯಾತರನ್ನು ನಡೆಸಿಕೊಂಡ ಶ್ರೀಲಂಕಾದ ಪರಿಸ್ಥಿತಿಯಿಂದ ಭಾರತ ಕಲಿಯಬೇಕಿದೆ: ರಘುರಾಮ್ ರಾಜನ್
ಹೊಸದಿಲ್ಲಿ: ಹತ್ತು ವರ್ಷಗಳ ಹಿಂದೆ ಇದ್ದಷ್ಟು ಉದಾರವಾದಿ ಪ್ರಜಾಪ್ರಭುತ್ವವಾಗಿ ಈಗ ಭಾರತ ಉಳಿದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
NDTV ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ರಾಜನ್, ಶ್ರೀಲಂಕಾದ ಪ್ರಸಕ್ತ ಸ್ಥಿತಿ ಹಾಗೂ ಆ ದೇಶ ತನ್ನ ಅಲ್ಪಸಂಖ್ಯಾತರನ್ನು ನೋಡಿಕೊಂಡ ರೀತಿಯನ್ನು ಉಲ್ಲೇಖಿಸಿದರಲ್ಲದೆ ಇದು ಭಾರತಕ್ಕೆ ಎಚ್ಚರಿಕೆಯಾಗಬೇಕು ಎಂದು ಹೇಳಿದರು.
"ಶ್ರೀಲಂಕಾದಲ್ಲಿ ದೊಡ್ಡ ಪ್ರಮಾಣ ಅಲ್ಪಸಂಖ್ಯಾತರಾದ ತಮಿಳರಿದ್ದರು. ಆದರೆ ಅವರು ನಿರುದ್ಯೋಗ ಸಮಸ್ಯೆಯಿಂದ ನರಳಿದಾಗ ಅಲ್ಲಿನ ರಾಜಕಾರಣಿಗಳು ಇದೇ ವಿಚಾರದ ಲಾಭ ಪಡೆದುಕೊಂಡ ಪರಿಣಾಮ ಇದು ಅಂತಿಮವಾಗಿ ಅಲ್ಲಿ ನಾಗರಿಕ ಯುದ್ಧಕ್ಕೆ ಕಾರಣವಾಯಿತು, ಇದು ನನಗನಿಸುತ್ತದೆ ನಾವು ಕಲಿಯಬೇಕಾದ ಪಾಠವಾಗಿದೆ. ನಾವು ದೇಶದಲ್ಲಿ ಮತೀಯ ಸೌಹಾರ್ದತೆಗೆ ಮತ್ತು ಒಗ್ಗಟ್ಟಿಗೆ ಶ್ರಮಿಸೋಣ. ಇದು ದೇಶದ ಆರ್ಥಿಕತೆಗೂ ಒಳ್ಳೆಯದು,'' ಎಂದು ಅವರು ಹೇಳಿದರು.
"ಶ್ರೀಲಂಕಾದಂತಹ ಪರಿಸ್ಥಿತಿಯಿಂದ ಭಾರತ ಸ್ವಲ್ಪ ದೂರವೇ ಇದ್ದರೂ ಇಲ್ಲಿ ಕೆಲ ರಾಜಕಾರಣಿಗಳು ಬೆಂಕಿಗೆ ತುಪ್ಪ ಸುರಿಯುತ್ತಿರುವುದನ್ನು ಗಮನಿಸಿದರೆ ನಾವು ಭಯ ಪಡಲು ಆರಂಭಿಸಬೇಕಿದೆ,'' ಎಂದು ರಾಜನ್ ಹೇಳಿದರು.
ದೇಶದಲ್ಲಿನ ಮತೀಯ ಉದ್ವಿಗ್ನತೆ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ಕೇಳಿದಾಗ, "ಜನರಿಗೆ ಚಿಂತೆಯಾಗುತ್ತದೆ. ಅಲ್ಪಸಂಖ್ಯಾತರನ್ನು ಸರಿಯಾಗಿ ನೋಡಿಕೊಳ್ಳದ ದೇಶದಲ್ಲಿ ಉದ್ಯಮ ಆರಂಭಿಸಬೇಕೇ ಎಂದು ಯೋಚಿಸಲು ಆರಂಭಿಸುತ್ತಾರೆ,''ಎಂದರು.
"ಸಹಿಷ್ಣುತೆಯ, ಗೌರವಯುತ ಪ್ರಜಾಪ್ರಭುತ್ವವಾಗಿ ಭಾರತ ಹೊರಹೊಮ್ಮಲು ನಾಗರಿಕ ಸಮಾಜ ಕೂಡ ಶ್ರಮಿಸಬೇಕಿದೆ. ನಾವು ಸರಿಯಾದ ಕೆಲಸಗಳನ್ನು ಮಾಡಿದರೆ ನಾವು ಕಳೆದುಕೊಂಡಿದ್ದನ್ನು ಮರಳಿ ಪಡೆಯಬಹುದು, ಆದರೆ ಇದೇ ಹಾದಿಯಲ್ಲಿ ಮುಂದುವರಿದರೆ ಮುಂದೆ ಕಷ್ಟವಾದೀತು,'' ಎಂದು ಅವರು ಹೇಳಿದರು.