×
Ad

ಮೌದೂದಿ, ಸಯ್ಯದ್ ಕುತುಬ್ ಅವರ ಪಠ್ಯ ಕೈಬಿಟ್ಟ ಆಲಿಘರ್ ಮುಸ್ಲಿಂ ವಿವಿ

Update: 2022-08-03 15:13 IST
Photo credit: https://www.amu.ac.in/

ಹೊಸದಿಲ್ಲಿ: ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಇಸ್ಲಾಮಿಕ್ ಚಿಂತಕರಾದ ಮೌಲಾನ ಅಬುಲ್ ಅಲ ಮೌದೂದಿ ಹಾಗೂ ಸಯ್ಯದ್ ಖುತುಬ್ ಶಹೀದ್ ಅವರ ಕುರಿತಾದ ಐಚ್ಛಿಕ ವಿಷಯವನ್ನು  ತನ್ನ ಪಠ್ಯಕ್ರಮದಿಂದ ತಕ್ಷಣ ತೆಗೆಯಲು ನಿರ್ಧರಿಸಿದೆ. ವಿವಿಯ ಇಸ್ಲಾಮಿಕ್ ಅಧ್ಯಯನ ವಿಭಾಗದಲ್ಲಿ ಈ ಪಠ್ಯ ಕಲಿಸಲಾಗುತ್ತಿತ್ತು.

ವಿವಾದವನ್ನು ತಪ್ಪಿಸಲು ವಿವಿ ಈ ಎರಡು ಚಿಂತಕರ ಸಹಿತ ಇಸ್ಲಾಮಿಕ್ ಚಿಂತಕರ ಕುರಿತು ಇದ್ದ ಐಚ್ಛಿಕ ವಿಷಯವನ್ನು ಕೈಬಿಡಲು ನಿರ್ಧರಿಸಿದೆ ಎಂದು ವಿವಿ ವಕ್ತಾರ ಶಫೀ ಕಿದ್ವಾಯಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಆಲಿಘರ್ ಮುಸ್ಲಿಂ ವಿವಿ, ಜಾಮಿಯಾ ಮಿಲಿಯಾ ವಿವಿ ಹಾಗೂ ಜಾಮಿಯಾ ಹಮ್‍ದರ್ದ್ ವಿವಿಯಲ್ಲಿನ ಪಠ್ಯಕ್ರಮಗಳ ಕೆಲ ಭಾಗಗಳ ಕುರಿತು ಆಕ್ಷೇಪ ಸೂಚಿಸಿ 25 ಪ್ರೊಫೆಸರುಗಳು ಮತ್ತು ಹೋರಾಟಗಾರರು ಪ್ರಧಾನಿಗೆ ಜುಲೈ 27ರಂದು ಪತ್ರ ಬರೆದ ನಂತರದ ಬೆಳವಣಿಗೆ ಇದಾಗಿದೆ.

ಭಾರತದ ಸಂಪೂರ್ಣ ಇಸ್ಲಾಮೀಕರಣವಾಗಬೇಕೆಂದು ಹೇಳುವ ಜಮಾತ್-ಇ-ಇಸ್ಲಾಮೀ ಸ್ಥಾಪಕ ಮೌದೂದಿ ಆಗಿದ್ದಾರೆ ಹಾಗೂ ಮೌದೂದಿ ಅವರ ಪ್ರಮುಖ ಸಿದ್ಧಾಂತದಿಂದಲೇ ಅಲ್ ಖೈದಾ ಮತ್ತು ಐಎಸ್‍ಐ ನಂತಹ ಉಗ್ರ ಸಂಘಟನೆಗಳು ಪ್ರೇರಿತವಾಗಿವೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಆದರೆ ಮೌದೂದಿ ಅವರು ಸೂಚಿಸಿದ ವಿಧಾನಗಳು ಶಾಂತಿಯುತ ಮತ್ತು ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿತ್ತು ಎಂದು ವಿವಿಯ ಪ್ರೊಫೆಸರ್ ಒಬೈದುಲ್ಲಾ ಫಹದ್ ಹೇಳಿದ್ದಾರೆ. ಪಾಶ್ಚಿಮಾತ್ಯ ವಸಾಹತುಶಾಹಿಗಳ ವಿರುದ್ಧದ ಅತ್ಯಂತ ತೀಕ್ಷ್ಣ ದನಿ ಅವರದ್ದಾಗಿದ್ದರಿಂದ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರಲ್ಲದೆ ತಾವು ಮೌದೂದಿ ಕುರಿತು ಕಲಿಯುತ್ತಾ ಅದನ್ನು ಕಳೆದ 50 ವರ್ಷಗಳಿಂದ ಕಲಿಸುತ್ತಾ ಬಂದಿದ್ದೇನೆ, ಆದರೆ ಅವರ ಕುರಿತಾದ ವಿಚಾರಗಳಲ್ಲಿ ಉಗ್ರವಾದ ಅಥವಾ ಹಿಂಸೆಯ ಒಂದೇ ಒಂದು ವಾಕ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕೆಲವು ವ್ಯಕ್ತಿಗಳ ಇಚ್ಛೆಗೆ ಅನುಗುಣವಾಗಿ ಕೇಂದ್ರೀಯ ವಿವಿಯೊಂದರ ಪಠ್ಯವನ್ನು ಬದಲಾಯಿಸಬಾರದು ಎಂದು ವಿವಿಯ ವಿದ್ಯಾರ್ಥಿ ನಾಯಕರಲ್ಲೊಬ್ಬರಾದ ಅಮೀರ್ ಮಿಂಟೋ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News