ಚುನಾವಣೆಗಳ ವೇಳೆ ಪಕ್ಷಗಳು ಉಚಿತ ಉಡುಗೊರೆ ಘೋಷಿಸುವುದನ್ನು ನಿಯಂತ್ರಿಸಲು ಸಮಿತಿ ಅಗತ್ಯವಿದೆ: ಸುಪ್ರೀಂ ಕೋರ್ಟ್

Update: 2022-08-03 12:20 GMT

ಹೊಸದಿಲ್ಲಿ: ಚುನಾವಣಾ ಪ್ರಚಾರಗಳ ವೇಳೆ ಮತದಾರರಿಗೆ ಉಚಿತ ಉಡುಗೊರೆಗಳನ್ನು ರಾಜಕೀಯ ಪಕ್ಷಗಳು ಘೋಷಿಸುವುದನ್ನು ನಿಯಂತ್ರಿಸಲು ನೀತಿ ಆಯೋಗ, ವಿತ್ತ ಆಯೋಗ, ವಿಪಕ್ಷ ಮತ್ತು ಆಡಳಿತ ಪಕ್ಷಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿನಿಧಿಗಳು ಮತ್ತಿತರ ಸಂಬಂಧಿತರನ್ನೊಳಗೊಂಡ ಉನ್ನತ ಸಮಿತಿಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಇಂದು ಅಭಿಪ್ರಾಯ ಪಟ್ಟಿದೆ.

ಚುನಾವಣೆ ಸಂದರ್ಭ ರಾಜಕೀಯ ಪಕ್ಷಗಳು ಉಡುಗೊರೆಗಳ ಆಶ್ವಾಸನೆ ನೀಡುವ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.

ಇಂತಹ ಪರಿಪಾಠವು "ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದರಿಂದ'' ಅವುಗಳ ಪ್ರಯೋಜನಗಳು ಹಾಗೂ ದುಷ್ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವುದು ಅಗತ್ಯವಾಗಿದೆ, ಪ್ರಸ್ತಾವಿತ ಸಮಿತಿಯು ಈ ಪರಿಪಾಠವನ್ನು ನಿಯಂತ್ರಿಸುವ ಬಗ್ಗೆ ಕೇಂದ್ರ ಸರಕಾರ, ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ವರದಿ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪೀಠ ಹೇಳಿದೆ.

ಉನ್ನತ ಸಮಿತಿ ರಚನೆ ಕುರಿತ ಸಲಹೆಗಳೊಂದಿಗೆ ಏಳು ದಿನಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರಕಾರ, ಚುನಾವಣಾ ಆಯೋಗ, ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮತ್ತು ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿದೆ.

ಈ ಉಚಿತ ವಸ್ತುಗಳ ನೀಡುವಿಕೆಯು ಭಾರತವನ್ನು ಆರ್ಥಿಕ ಅವನತಿಗೆ ತಳ್ಳಲಿದೆ ಎಂದು ನ್ಯಾಯಾಲಯದಲ್ಲಿ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಈ ವಿಚಾರ ಚರ್ಚಿಸಿ ಕಾನೂನು ಜಾರಿಗೊಳಿಸುವ ವಿಚಾರವನ್ನು ಸಂಸತ್ತಿಗೆ ಬಿಟ್ಟುಬಿಡಬೇಕೆಂದು ಕಪಿಲ್ ಸಿಬಲ್ ಹೇಳಿದಾಗ ಮಧ್ಯಪ್ರವೇಶಿಸಿದ ಜಸ್ಟಿಸ್ ರಮಣ ಯಾವುದೇ ರಾಜಕೀಯ ಪಕ್ಷ ಈ ಉಚಿತ ಉಡುಗೊರೆಗಳ ವಿರುದ್ಧ ನಿಲ್ಲುವುದಿಲ್ಲ ಎಂದರು.

"ಈ ವಿಚಾರ ಸಂಸತ್ತು ಚರ್ಚಿಸಬಹುದು ಎಂದು ನೀವಂದುಕೊಂಡಿದೀರಾ? ಯಾವ ಪಕ್ಷ ಚರ್ಚೆ ನಡೆಸಬಹುದು? ಯಾವುದೇ ರಾಜಕೀಯ ಪಕ್ಷ ಈ ಉಚಿತ ಉಡುಗೊರೆಗಳನ್ನು ವಿರೋಧಿಸುವುದಿಲ್ಲ. ಎಲ್ಲರಿಗೂ ಅದು ಬೇಕು, ಆದರೆ ನಾವು ತೆರಿಗೆದಾರರು ಮತ್ತು ದೇಶದ ಆರ್ಥಿಕತೆಯ ಬಗ್ಗೆ ಯೋಚಿಸಬೇಕು,''ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News