×
Ad

ಶಿರೂರು ಜಲಪ್ರವಾಹ: 3 ಸಂಪೂರ್ಣ ಸಹಿತ 7 ಮನೆಗಳಿಗೆ ಹಾನಿ

Update: 2022-08-03 19:41 IST

ಬೈಂದೂರು: ಶಿರೂರಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಜಲ ಪ್ರಳಯದಿಂದ ಮೂರು ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ. ಅದೇ ರೀತಿ ಮಳೆಯಿಂದ ಮೂರು ಜಾನುವಾರು ಮೃತಪಟ್ಟು, ಐದು ಜಾನುವಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಬಗ್ಗೆ ವರದಿ ಯಾಗಿದೆ.

ಶಿರೂರು, ಪಡುವರಿ ಹಾಗೂ ಯಡ್ತರೆ ಗ್ರಾಮಗಳಲ್ಲಿ ಹೆಚ್ಚು ಮಳೆಯಿಂದ ಪ್ರವಾಹ ಉಂಟಾಗಿದ್ದು, ಮಂಗಳವಾರ ಶಿರೂರು ಗ್ರಾಮದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ 2 ಕಾಳಜಿ ಕೇಂದ್ರ ತೆರಲಾಗಿದ್ದು, 130 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಇವರೆಲ್ಲ ಕಾಳಜಿ ಕೇಂದ್ರಕ್ಕೆ ತೆರಳದೆ ಅವರ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಮಳೆ ನೀರು ಇಳಿದ ಹಿನ್ನೆಲೆಯಲ್ಲಿ ಇವರೆಲ್ಲ ವಾಪಾಸ್ಸು ಮನೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಆ.2ರಂದು ಮೀನು ಹಿಡಿಯಲು ಬಲೆ ಹಾಕುತ್ತಿದ್ದ ವೇಳೆ ಸೌರ್ಪಣಿಕ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ಬೈಂದೂರು ತಾಲೂಕಿನ ಹಡವು ಗ್ರಾಮದ ನಾರಾಯಣ ದೇವಾಡಿಗ(55) ಎಂಬವರ ಮೃತದೇಹ ಅಲ್ಲೇ ಸಮೀಪ ಇಂದು ಪತ್ತೆಯಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಏಳು ಮನೆಗಳಿಗೆ ಹಾನಿ: ನಾಡಾ ಶಂಕರ ಆಚಾರ್ಯ ಎಂಬವರ ಮನೆ ಸಂಪೂರ್ಣ ಕುಸಿದು ಬಿದ್ದು, 2ಲಕ್ಷ ರೂ., ಶಿರೂರು ನಾಗಮ್ಮ ಶೆಟ್ಟಿ ಎಂಬವರ ವಾಸ್ತವ್ಯದ ಮನೆ ಸಂಪೂರ್ಣ ಹಾನಿಯಾಗಿ 5ಲಕ್ಷ ರೂ., ಬೈಂದೂರು ಗಂಗಾಧರ ಆಚಾರಿ ಎಂಬವರ ವಾಸ್ತವ್ಯದ ಮನೆ ಸಂಪೂರ್ಣ ಹಾನಿಯಾಗಿ ಸುಮಾರು 5ಲಕ್ಷ ರೂ. ನಷ್ಟ ಉಂಟಾಗಿದೆ.

ಅದೇ ರೀತಿ ಬೈಂದೂರು ವೆಂಕಟಮ್ಮ ಪೂಜಾರಿ ಎಂಬವರು ಮನೆಗೆ ಹಾನಿಯಾಗಿ 50 ಸಾವಿರ ರೂ., ಬಿಜೂರು ಮೂಕಾಂಬಿಕಾ ಎಂಬವರ ಮನೆಗೆ ಹಾನಿಯಾಗಿ ೫೦,೦೦೦ರೂ., ಬೈಂದೂರು ರುಕ್ಕು ದೇವಾಡಿಗ ಎಂಬವರ ಮನೆ ಭಾಗಶಃ ಹಾನಿಯಾಗಿ ೪೦,೦೦೦ರೂ., ಯಡ್ತರೆ ಪ್ರೇಮ ಎಂಬವರ ಮನೆಗೆ ಭಾಗಶಃ ಹಾನಿಯಾಗಿ ೪೦,೦೦೦ ರೂ. ನಷ್ಟ ಉಂಟಾಗಿದೆ.

71 ಮನೆಗಳು ಜಲಾವೃತ: ಮಳೆಯಿಂದಾಗಿ ಶಿರೂರು, ಬೈಂದೂರು ಹಾಗೂ ಯಡ್ತರೆ ಗ್ರಾಮದ ಒಟ್ಟು ೭೧ ಮನೆಗಳಿಗೆ ನೀರು ನುಗ್ಗಿ ಹಲವು ಪರಿಕರಗಳು ಹಾನಿಯಾಗಿದ್ದು, ಇವರಿಗೆ ತಲಾ ೧೦ಸಾವಿರ ರೂ.ನಂತೆ ಒಟ್ಟು ೭.೧೦ಲಕ್ಷ ರೂ. ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬೈಂದೂರು ಪ್ರಭಾರ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.

ಶಿರೂರಿನಲ್ಲಿ ಮಳೆಯಿಂದ ಎರಡು ದನ, ಒಂದು ಕರು ಮೃತಪಟ್ಟಿದ್ದು, ಒಟ್ಟು ೪೮ಸಾವಿರ ರೂ. ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಅದೇ ರೀತಿ ಮಳೆಯ ನೀರಿನಲ್ಲಿ ಮೂರು ದನ ಹಾಗೂ ಎರಡು ಕರುಗಳು ಕೊಚ್ಚಿಕೊಂಡು ಹೋಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಬುಧವಾರ ಮಳೆ ಪ್ರಮಾಣ ಇಳಿಕೆಯಾಗಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ಉಡುಪಿ-೫.೧ಮಿ.ಮೀ., ಬ್ರಹ್ಮಾವರ- ೧.೯ಮಿ.ಮೀ., ಕಾಪು- ೩೪.೦ಮಿ.ಮೀ., ಕುಂದಾಪುರ- ೨.೬ಮಿ.ಮೀ., ಬೈಂದೂರು- ೪.೯ ಮಿ.ಮೀ., ಕಾರ್ಕಳ-೧೩.೭ಮಿ.ಮೀ., ಹೆಬ್ರಿ-೨.೦ಮಿ.ಮೀ ಹಾಗೂ ಜಿಲ್ಲೆಯಲ್ಲಿ ಸರಾಸರಿ ೭.೦ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

54 ದೋಣಿಗಳಿಗೆ ಹಾನಿ: 1.61 ಕೋಟಿ ನಷ್ಟ

ಮಳೆಯಿಂದಾಗಿ ಶಿರೂರಿನಲ್ಲಿ ನದಿ ಸಮೀಪ ಲಂಗರು ಹಾಕಿದ ಒಟ್ಟು ೫೪ ಮೀನುಗಾರಿಕೆ ದೋಣಿಗಳಿಗೆ ಹಾನಿಯಾಗಿದ್ದು, ಸುಮಾರು ೧.೬೧ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.

ಅದೇ ರೀತಿ ಒಂದು ಪಾತಿ ದೋಣಿ ಸಮುದ್ರಪಾಲಾಗಿದ್ದು, ಇನ್ನು ದೊರೆತಿಲ್ಲ ಎಂದು ದೂರಲಾಗಿದೆ. ಸುಮಾರು ೬೬ ಮೀನುಗಾರರ ಮೀನುಗಾರಿಕಾ ಬಲೆ ಕೂಡ ಹಾನಿಯಾಗಿದ್ದು, ಇದರಿಂದ ೧.೨೯ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News