ನೋಟಿಸ್‌ ಇಲ್ಲದೆ ಬುಲ್ಡೋಝರ್‌ ಮೂಲಕ ಜನರನ್ನು ನಿರಾಶ್ರಿತರನ್ನಾಗಿಸುವಂತಿಲ್ಲ: ದಿಲ್ಲಿ ಹೈಕೋರ್ಟ್‌

Update: 2022-08-03 14:34 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ದಿಲ್ಲಿ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ (DUSIB) ನೊಂದಿಗೆ ಸಮಾಲೋಚಿಸಿ ಮಾತ್ರ ಯಮುನಾ ಪ್ರವಾಹ ಪ್ರದೇಶದಲ್ಲಿ ಅನಧಿಕೃತ ನಿರ್ಮಾಣಗಳನ್ನು ಕೆಡವಲು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ಹೈಕೋರ್ಟ್ ನಿರ್ದೇಶಿಸಿದೆ. ಬುಲ್ಡೋಝರ್‌ ಮೂಲಕ ಜನರನ್ನು ಹೊರಹಾಕಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ, ಜನರ ಮನೆ ಬಾಗಿಲಿಗೆ ಮುಂಜಾನೆ ಅಥವಾ ಸಂಜೆ ತಡವಾಗಿ, ಯಾವುದೇ ಸೂಚನೆಯಿಲ್ಲದೆ ಬುಲ್ಡೋಝರ್‌ ಕೊಂಡೊಯ್ಯುವುದು ಅವರನ್ನು ಸಂಪೂರ್ಣವಾಗಿ ನಿರಾಶ್ರಿತರನ್ನಾಗಿ ಮಾಡುತ್ತದೆ ಎಂದು ಹೇಳಿದೆ.

ಅತಿಕ್ರಮಣದಾರ ಎಂದು ಹೇಳಿಕೊಳ್ಳುವ ವ್ಯಕ್ತಿಯನ್ನು ರಾತ್ರೋರಾತ್ರಿ ಅವರ ನಿವಾಸದಿಂದ ತೆಗೆದುಹಾಕಿರುವ ಡಿಡಿಎ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಹೇಳಿದ್ದಾರೆ. "ಅಂತಹ ವ್ಯಕ್ತಿಗಳಿಗೆ ಸಮಂಜಸವಾದ ಅವಧಿಯನ್ನು ನೀಡಬೇಕು ಮತ್ತು ಯಾವುದೇ ನೆಲಸಮಗೊಳಿಸುವ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ಅವರಿಗೆ ತಾತ್ಕಾಲಿಕ ಸ್ಥಳವನ್ನು ಒದಗಿಸಬೇಕು" ಎಂದು ನ್ಯಾಯಾಲಯವು ಡಿಡಿಎಗೆ ನಿರ್ದೇಶಿಸಿದ್ದು, ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಕಷ್ಟು ಸಮಯವನ್ನು ನೀಡುವಂತೆ ಸೂಚಿಸಿದೆ.

ಪರ್ಯಾಯವಾಗಿ, ಮೂರು ತಿಂಗಳ ಕಾಲ DUSIB ಒದಗಿಸಿದ ಆಶ್ರಯದಲ್ಲಿ ನಿವಾಸಿಗಳಿಗೆ ವಸತಿ ಕಲ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು, ಇದರಿಂದಾಗಿ ಕೆಡವಲಾಗುತ್ತಿರುವ ನಿರ್ಮಾಣದ ವಾಸಿಗಳು ಪರ್ಯಾಯ ವಸತಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಜೂನ್ 25 ರಂದು ಯಾವುದೇ ಸೂಚನೆ ನೀಡದೆ ಡಿಡಿಎ ಅಧಿಕಾರಿಗಳು ಈ ಪ್ರದೇಶಕ್ಕೆ ಆಗಮಿಸಿ ಸುಮಾರು 300 ಗುಡಿಸಲುಗಳನ್ನು ಕೆಡವಿದ್ದಾರೆ ಎಂದು ಆರೋಪಿಸಿ ಶಕರಪುರ ಸ್ಲಂ ಯೂನಿಯನ್ ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಈ ಆದೇಶವನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News