×
Ad

ಯಂಗ್ ಇಂಡಿಯಾ ಕಚೇರಿಗೆ ಸೀಲ್ ಹಾಕಿದ ಜಾರಿ ನಿರ್ದೇಶನಾಲಯ

Update: 2022-08-03 21:16 IST
Photo: Twitter/@Supriya23bh

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಹೆರಾಲ್ಡ್ ಹೌಸ್‌ನಲ್ಲಿರುವ ಯಂಗ್ ಇಂಡಿಯಾ ಕಚೇರಿಗೆ ಜಾರಿ ನಿರ್ದೇಶನಾಲಯ (ಈಡಿ) ಬುಧವಾರ ಸೀಲ್ ಹಾಕಿದೆ. ಏಜೆನ್ಸಿಯ ಅನುಮತಿಯಿಲ್ಲದೆ ಆವರಣವನ್ನು ತೆರೆಯಬಾರದು ಎಂದು ಈಡಿ ಅದೇ ಸಮಯದಲ್ಲಿ ನಿರ್ದೇಶಿಸಿದೆ. ಮತ್ತೊಂದೆಡೆ, ಜೈರಾಮ್ ರಮೇಶ್, ಪ್ರಮೋದ್ ತಿವಾರಿ, ಪಿ ಚಿದಂಬರಂ, ಸಲ್ಮಾನ್ ಖುರ್ಷಿದ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದ್ದಾರೆ. ಈಡಿ ಕ್ರಮಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕರ ಸಭೆ ನಡೆಯುತ್ತಿದೆ.

ಅದೇ ಸಮಯದಲ್ಲಿ ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯ ಹೊರಗೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸ 10 ಜನಪಥ್ ಹೊರಗೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, "ಎಐಸಿಸಿ ಪ್ರಧಾನ ಕಚೇರಿಗೆ ದೆಹಲಿ ಪೊಲೀಸರು ರಸ್ತೆಯನ್ನು ನಿರ್ಬಂಧಿಸುವುದು ಈಗ ಒಂದು ಅಪವಾದಕ್ಕಿಂತ ಹೆಚ್ಚಾಗಿ ಸಾಮಾನ್ಯ ಅಭ್ಯಾಸವಾಗಿದೆ." ಎಂದಿದ್ದಾರೆ.

ಈಡಿಯಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಧಿಕೃತ ಪ್ರತಿನಿಧಿಗಳ ಗೈರುಹಾಜರಿಯಿಂದಾಗಿ ಮಂಗಳವಾರದ ದಾಳಿಯ ವೇಳೆ ಸಂಗ್ರಹಿಸಲಾಗಲಿಲ್ಲ, ಸಾಕ್ಷ್ಯಗಳನ್ನು ರಕ್ಷಿಸಲು ಕಚೇರಿಗೆ ತಾತ್ಕಾಲಿಕವಾಗಿ ಮೊಹರು ಹಾಕಲಾಗಿದೆ ಎಂದು ಅವರು ಹೇಳಿದರು. ಉಳಿದಂತೆ ನ್ಯಾಷನಲ್ ಹೆರಾಲ್ಡ್ ಕಚೇರಿ ಬಳಕೆಗೆ ಮುಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ತನಿಖಾಧಿಕಾರಿಯ ಸಹಿಯನ್ನು ಹೊಂದಿರುವ ಯಂಗ್ ಇಂಡಿಯನ್ ಕಚೇರಿಯ ಹೊರಗೆ ಈಡಿ ನೋಟಿಸ್ ಅಂಟಿಸಿರುವುದಾಗಿ ಅವರು ಹೇಳಿದರು. ಏಜೆನ್ಸಿಯ ಅನುಮತಿ ಇಲ್ಲದೆ ಈ ಕಚೇರಿ ತೆರೆಯುವಂತಿಲ್ಲ ಎಂದು ನೋಟಿಸ್ ನಲ್ಲಿ ಬರೆಯಲಾಗಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಗಳವಾರ ಈಡಿ ಹೆರಾಲ್ಡ್ ಹೌಸ್ ಸೇರಿದಂತೆ 12 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News