ಮತಪತ್ರ ಹ್ಯಾಕಿಂಗ್ ಬೆದರಿಕೆ : ಬ್ರಿಟನ್ ಪ್ರಧಾನಿ ಆಯ್ಕೆಯ ಮತದಾನ ಪ್ರಕ್ರಿಯೆ ವಿಳಂಬ

Update: 2022-08-03 17:46 GMT
photo: PTA

ಲಂಡನ್, ಆ.3: ಹ್ಯಾಕರ್‌ಗಳು ಮತಪತ್ರವನ್ನು ಬದಲಾಯಿಸಬಹುದು ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಬ್ರಿಟನ್‌ನ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಕನ್ಸರ್ವೇಟಿವ್ ಪಕ್ಷದ ಸದಸ್ಯರು ನಡೆಸುವ ಮತದಾನ ಪ್ರಕ್ರಿಯೆಯನ್ನು ವಿಳಂಬಿಸಲಾಗಿದೆ ಎಂದು ‘ದಿ ಟೆಲಿಗ್ರಾಫ್’ ಮಂಗಳವಾರ ವರದಿ ಮಾಡಿದೆ.

ಬ್ರಿಟನ್‌ನ ಗುಪ್ತಚರ ಏಜೆನ್ಸಿ ‘ದಿ ಗವರ್ನ್‌ಮೆಂಟ್ ಕಮ್ಯುನಿಕೇಶನ್ ಹೆಡ್‌ಕ್ವಾರ್ಟರ್ಸ್ (ಜಿಸಿಎಚ್‌ಕ್ಯು)’ ಹ್ಯಾಕಿಂಗ್ ಸಾಧ್ಯತೆಯ ಎಚ್ಚರಿಕೆ ರವಾನಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಬ್ರಿಟನ್‌ಗೆ ಎದುರಾಗಲಿರುವ ಬೆದರಿಕೆಯನ್ನು ಗುರುತಿಸಿ ನಿವಾರಿಸುವ ಕಾರ್ಯ ಮಾಡುವ ಜಿಸಿಎಚ್‌ಕ್ಯು ವಿಶ್ವದಾದ್ಯಂತದಿಂದ ಮಾಹಿತಿ ಸಂಗ್ರಹಿಸುತ್ತದೆ. ಮತಪತ್ರ ಹ್ಯಾಕ್ ಆಗುವ ಸಾಧ್ಯತೆಯಿದೆ ಎಂದು ಈ ಸಂಸ್ಥೆ ಕನ್ಸರ್ವೇಟಿವ್ ಪಕ್ಷಕ್ಕೆ ಸಲಹೆ ನೀಡಿದೆ . ಪ್ರತಿಕೂಲ ದೇಶದಿಂದ ಯಾವುದೇ ನಿರ್ದಿಷ್ಟ ಬೆದರಿಕೆ ಇಲ್ಲ, ಇದೊಂದು ಸಾಮಾನ್ಯ ಸಲಹೆಯಾಗಿದೆ.

ಮತದಾನ ಪ್ರಕ್ರಿಯೆಯ ದುರ್ಬಲತೆಯ ಬಗ್ಗೆ ಸಲಹೆಯಲ್ಲಿ ಬೆಳಕು ಚೆಲ್ಲಲಾಗಿದೆ ಎಂದು ಬ್ರಿಟನ್‌ನ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ (ಎನ್‌ಸಿಎಸ್‌ಸಿ) ವಕ್ತಾರರು ಹೇಳಿದ್ದಾರೆ. ಬ್ರಿಟನ್‌ನ ಪ್ರಜಾಸತ್ತಾತ್ಮಕ ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ರಕ್ಷಿಸುವುದು ಎನ್‌ಸಿಎಸ್‌ಸಿಯ ಆದ್ಯತೆಯಾಗಿದೆ ಮತ್ತು ಸೈಬರ್ ಭದ್ರತೆ ಮಾರ್ಗಸೂಚಿ ಮತ್ತು ನೆರವನ್ನು ಒದಗಿಸಲು ನಾವು ಎಲ್ಲಾ ಸಂಸದೀಯ ರಾಜಕೀಯ ಪಕ್ಷಗಳು, ಸ್ಥಳೀಯ ಪ್ರಾಧಿಕಾರ ಮತ್ತು ಸಂಸದರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲಿದ್ದೇವೆ.

ಈ ಪ್ರಕಾರ, ಆನ್‌ಲೈನ್‌ನಲ್ಲಿ ನಡೆಯುವ ಬ್ರಿಟನ್ ಪ್ರಧಾನಿ ಆಯ್ಕೆಯ ಮತದಾನ ಪ್ರಕ್ರಿಯೆಯ ಬಗ್ಗೆ ಸಲಹೆ ನೀಡಿದ್ದೇವೆ ಎಂದವರು ಹೇಳಿರುವುದಾಗಿ ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News