ಕಾಮನ್‍ವೆಲ್ತ್ ಕ್ರೀಡಾಕೂಟ; ಜ್ಯೂಡೊ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್‌ಗೆ ಬೆಳ್ಳಿ ಪದಕ

Update: 2022-08-04 03:04 GMT
ತುಲಿಕಾ ಮಾನ್‌ (PTI photo)

ಬರ್ಮಿಂಗ್‍ಹ್ಯಾಂ: ಕಾಮನ್‍ವೆಲ್ತ್ ಕ್ರೀಡಾಕೂಟದ 78 ಕೆಜಿ ವೈಯಕ್ತಿಕ ಜ್ಯೂಡೊ ಸ್ಪರ್ಧೆಯಲ್ಲಿ ಭಾರತದ ಜ್ಯೂಡೊ ಪಟು ತುಲಿಕಾ ಮಾನ್ ಸ್ಕಾಟ್ಲೆಂಡ್‍ನ ಸರಹ್ ಅದ್ಲಿಂಗ್ಟನ್ ವಿರುದ್ಧ ಸೆಣಸಿದರೂ, ವೀರೋಚಿತ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಬುಧವಾರ ಎರಡು ಹೋರಾಟಗಳಲ್ಲಿ ಗೆದ್ದ ತುಲಿಕಾ ಫೈನಲ್‍ಗೆ ಲಗ್ಗೆ ಇಟ್ಟು ಚಿನ್ನದ ಪದಕದ ಭರವಸೆ ಮೂಡಿಸಿದ್ದರು. ಫೈನಲ್‍ನಲ್ಲಿ ಕೂಡಾ ತುಲಿಕಾ ಮುನ್ನಡೆಯಲ್ಲಿದ್ದಾಗ, ಅದ್ಲಿಂಗ್ಟನ್ ನಿರ್ಣಾಯಕ ನಡೆ ಇಪ್ಪಾನ್‍ನಲ್ಲಿ ಭಾರತೀಯ ಪಟುವನ್ನು ಕೆಳಕ್ಕೆ ಬೀಳಿಸಿ ಚಿನ್ನದ ಪದಕ ಗೆದ್ದರು.

ಸ್ಪರ್ಧೆ ಮುಗಿಯಲು ಕೇವಲ 30 ಸೆಕೆಂಡ್ ಇದ್ದಾಗ ಅದ್ಲಿಂಗ್ಟನ್, ಶಕ್ತಿಶಾಲಿ ಎಸೆತದ ಮೂಲಕ ತುಲಿಕಾ ಅವರನ್ನು ಮ್ಯಾಟ್‍ಗೆ ಬೀಳಿಸಿದರು. ಆದಾಗ್ಯೂ 23 ವರ್ಷ ವಯಸ್ಸಿನ ದೆಹಲಿ ಪಟುವಿನ ಬೆಳ್ಳಿ ಸಾಧನೆ ಕಡೆಗಣಿಸುವಂಥದ್ದಲ್ಲ. ಈ ಮೂಲಕ ಬರ್ಮಿಂಗ್‍ಹ್ಯಾಂ ಕೂಟದಲ್ಲಿ ಭಾರತಕ್ಕೆ ಜ್ಯೂಡೊದಲ್ಲಿ ಮೂರನೇ ಪದಕ ಗೆದ್ದುಕೊಟ್ಟರು.

ಎರಡು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡ ತುಲಿಕಾ, ವಿಧವೆ ತಾಯಿಯ ಏಕೈಕ ಮಗುವಾಗಿದ್ದರು. ತುಲಿಕಾ ಕಾಮನ್‍ ವೆಲ್ತ್‌ನ ಮಾಜಿ ಜ್ಯೂಡೊ ಚಾಂಪಿಯನ್ ಕೂಡಾ ಹೌದು. ಫೈನಲ್‍ನಲ್ಲಿ ಸೋಲಿನ ಆಘಾತದಿಂದ ಸಮಾಧಾನಪಡಿಸಲಾಗದ ಸ್ಥಿತಿಯಲ್ಲಿದ್ದ ತುಲಿಕಾ ಶಿಷ್ಟಾಚಾರದ ಭಾಗವಾಗಿ ಮಾಧ್ಯಮದ ಜತೆ ಮಾತನಾಡಲೂ ಸಾಧ್ಯವಾಗಲಿಲ್ಲ. ನೆಲಕ್ಕೆ ಬಿದ್ದ ಅವರು ಕಣ್ಣೀರಿಡುತ್ತಿರುವ ದೃಶ್ಯ ಕಂಡುಬಂತು. ಚಿನ್ನದ ಪದಕ ಕಳೆದುಕೊಂಡ ಬೇಸರ ಸಹಜವಾಗಿಯೇ ಕಂಡುಬರುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News