ಜಾರ್ಖಂಡ್ ಶಾಸಕರ ಪ್ರಕರಣದ ತನಿಖೆಗೆ ದೆಹಲಿ, ಅಸ್ಸಾಂ ತಡೆ: ಬಂಗಾಳ ಸಿಐಡಿ ಆರೋಪ

Update: 2022-08-04 02:33 GMT

ಕೊಲ್ಕತ್ತಾ: ಜಾರ್ಖಂಡ್‌ನ ಕಾಂಗ್ರೆಸ್ ಶಾಸಕರಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸದಂತೆ ದೆಹಲಿ ಹಾಗೂ ಅಸ್ಸಾಂ ಪೊಲೀಸರು ತಡೆಯುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಅಪರಾಧ ತನಿಖಾ ವಿಭಾಗ (ಸಿಐಡಿ) ಗಂಭೀರ ಆರೋಪ ಮಾಡಿದೆ. ಆದರೆ ಉಭಯ ರಾಜ್ಯಗಳ ಪೊಲೀಸ್ ಪಡೆಗಳು ಈ ಆರೋಪವನ್ನು ನಿರಾಕರಿಸಿವೆ ಎಂದು hindustantimes.com ವರದಿ ಮಾಡಿದೆ.

ಈ ಪ್ರಕರಣದಲ್ಲಿ ಷಾಮೀಲಾಗಿದ್ದಾರೆ ಎಂದು ಆಪಾದಿಸಲಾಗಿರುವ ಸಿದ್ಧಾರ್ಥ ಮಜೂಂದಾರ್ ಎಂಬವರ ಮನೆಯ ಮೇಲೆ ದಾಳಿ ನಡೆಸಲು ಸಿಐಡಿ ತಂಡ ದೆಹಲಿಯ ಮೋತಿಬಾಗ್‍ಗೆ ತೆರಳಿತ್ತು. ಜುಲೈ 29ರಂದು ಶಾಸಕರು ಗುವಾಹತಿ ತಲುಪಿದ ಬಗ್ಗೆ ಹಾಗೂ ಮರುದಿನ ವಿಮಾನ ನಿಲ್ದಾಣದಿಂದ ಹೋಗುತ್ತಿರುವ ಬಗೆಗಿನ ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಲು ಮತ್ತೊಂದು ತಂಡ ಗುವಾಹತಿಗೆ ತೆರಳಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಾರ್ಖಂಡ್‍ನ ಕಾಂಗ್ರೆಸ್ ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚಪ್ ಮತ್ತು ನಮನ್ ಬಕ್ಸಿಲ್ ಕೊಂಗಾರಿಯವರನ್ನು ಪಶ್ಚಿಮ ಬಂಗಾಳ ಪೊಲೀಸರು ಜುಲೈ 31ರಂದು ಬಂಧಿಸಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರಿನಿಂದ 49 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು.

ಪ್ರಕರಣದಲ್ಲಿ ಅಸ್ಸಾಂನ ಕೆಲ ಪ್ರಮುಖ ವ್ಯಕ್ತಿಗಳನ್ನು ಶಾಸಕರಿಗೆ ಭೇಟಿ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಜೂಂದಾರ್ ಅವರನ್ನು ವಿಚಾರಣೆಗೆ ಗುರಿಪಡಿಸಲು ಅರೆಸ್ಟ್ ವಾರೆಂಟ್‍ನೊಂದಿಗೆ ಸಿಐಡಿ ಪೊಲೀಸರ ತಂಡ ಮೋತಿಬಾಗ್‍ಗೆ ತೆರಳಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ ತಾಂತ್ರಿಕ ಹಿನ್ನೆಲೆಯಲ್ಲಿ ಮಜೂಂದಾರ್ ನಿವಾಸದಲ್ಲಿ ಶೋಧನೆ ನಡೆಸದಂತೆ ದೆಹಲಿ ಪೊಲೀಸರು ತಡೆದಿದ್ದಾರೆ ಎಂದು ಆಪಾದಿಸಿ, ಪಶ್ಚಿಮ ಬಂಗಾಳ ಪೊಲೀಸ್ ಟ್ವೀಟ್ ಮಾಡಿದೆ.

ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಲು ಅಸ್ಸಾಂಗೆ ತೆರಳಿದ ಸಿಐಡಿ ತನಿಖಾ ತಂಡವನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ ಎಂದು ಕೊಲ್ಕತ್ತಾದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಆರೋಪವನ್ನು ಅಸ್ಸಾಂ ಪೊಲೀಸರು ನಿರಾಕರಿಸಿದ್ದು, ವಿಮಾನ ನಿಲ್ದಾಣ ಸಿಐಎಸ್‍ಎಫ್ ವ್ಯಾಪ್ತಿಗೆ ಬರುತ್ತದೆ ಎಂದು ಸಮುಜಾಯಿಷಿ ನೀಡಿದೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News