​ಪರಿಸರ, ಮಾನವ ವಿನಾಶಕಾರಿ ಕೈಗಾರಿಕೆಗಳು ಬೇಡ: ನೆಲ್ಲಿಗುಡ್ಡೆ ಪರಿಸರ ಹೋರಾಟ ಸಮಿತಿ

Update: 2022-08-04 05:08 GMT

ಕಾರ್ಕಳ: ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆ ಜನವಸತಿ ಪ್ರದೇಶದಲ್ಲಿ ಇರುವ ಕೈಗಾರಿಕಾ ಪ್ರಾಂಗಾಣದಲ್ಲಿ ಕಾರ್ಖಾನೆ ಪ್ರಾರಂಭಗೊಳ್ಳುವ ತಯಾರಿಯಲ್ಲಿದ್ದು ಪರಿಸರ ಹಾಗೂ ಮಾನವನಿಗೆ ವಿನಾಶಕಾರಿ ಕೈಗಾರಿಕೆಗಳು ಬೇಡವೇ ಬೇಡ ಎಂದು ನೆಲ್ಲಿಗುಡ್ಡೆ ಪರಿಸರ ಉಳಿಸಿ ಹೋರಾಟ ಸಮಿತಿ ತೀವ್ರವಾಗಿ ವಿರೋದಿಸುತ್ತದೆ.

ಈ ಸಂಬಂಧ ಕಾರ್ಕಳದ ಹೋಟೆಲ್ ಪ್ರಕಾಶ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶೇಖ್ ಶಬ್ಬೀರ್, ಕೈಗಾರಿಕಾ ಪ್ರದೇಶ ಸ್ಥಾಪಿಸಲು ಕೂಡಾ ಯೋಗ್ಯವಲ್ಲದ ಸ್ಥಳ ಇದಾಗಿದೆ. ಕೈಗಾರಿಕಾ ಪ್ರಾಂಗಾಣಕ್ಕೆ ಹೊಂದಿಕೊಂಡು ಸುಮಾರು 450 ಕ್ಕೂ ಮಿಕ್ಕಿ ಬಡ ಕುಟುಂಬಗಳು ವಾಸಿಸುತ್ತಿವೆ. ಕಣ್ಣಳತೆಯ ದೂರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ, ವಸತಿ ಪದವಿ ಪೂರ್ವ ಕಾಲೇಜು ಇದ್ದು ಸುಮಾರು 400 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ ಸುಮಾರು
100 ಮೀಟರ್ ದೂರದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ವಸತಿ ಶಿಲ್ಪಕಲಾ ಕೇಂದ್ರ ಶಾಲೆ ಇದ್ದು, ಇದರಲ್ಲಿ
ಸುಮಾರು 150 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ ಇದಕ್ಕೆ ಹೊಂದಿಕೊಂಡು ಅಂಗನವಾಡಿ, ಸರಕಾರಿ
ಶಾಲೆಗಳು, ಖಾಸಗಿ ಶಾಲೆ, ಪ್ರಾರ್ಥನಾ ಮಂದಿರಗಳು ಇವೆ ಎಂದರು.

ಈ ಕೈಗಾರಿಕೆಯಿಂದ ಹೊರಸೂಸುವ ದಟ್ಟವಾದ ಹೊಗೆ ಹಾಗೂ ದುರ್ವಾಸನೆಯಿಂದ ಜನಜೀವನಕ್ಕೆ ತೊಂದರೆಯಾಗಿ ಜನರು ಮಾರಕ ರೋಗಗಳಿಗೆ ತುತ್ತಾಗುವ ಸಂಭವವಿರುತ್ತದೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮಂಗಳೂರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ, ಜನಪ್ರತಿನಿಧಿ, ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಈಗಾಗಲೇ ಮನವಿಯನ್ನು ಸಲ್ಲಿಸಲಾಗಿದೆ.

ಗ್ರಾಮಸ್ಥರ ವಿರೋಧದ ನಡುವೆಯೂ ಇಂತಹ ಕಾರ್ಖಾನೆ ಸ್ಥಾಪನೆಗೆ ಮುಂದಾದರೆ ಯಾವ ಬೆಲೆ ತೆತ್ತಾದರೂ ಇದನ್ನು ಆರಂಭಿಸಲು ಬಿಡಲಾರೆವು ಎಂಬ ಸ್ಪಷ್ಟ ಸಂದೇಶವನ್ನು ಪತ್ರಿಕಾ ಗೋಷ್ಠಿಯ ಮುಖಾಂತರ ಎಲ್ಲರಿಗೂ ನೀಡ ಬಯಸುತ್ತೇವೆ ಮಾತ್ರವಲ್ಲದೆ ಯಾವ ಬೆಲೆ ತೆತ್ತಾದರೂ ಗ್ರಾಮಸ್ಥರು ಈ ಕೈಗಾರಿಕೆ ನಡೆಯಲು ಬಿಡುವುದಿಲ್ಲ ಎಂದರು. 

ಈ ಸಂದರ್ಭ ಗೌರವಾಧ್ಯಕ್ಷ  ಮಂಜುನಾಥ ನಾಯಕ್‌, ಅಧ್ಯಕ್ಷ ಪ್ರಶಾಂತ ಪೂಜಾರಿ, ಜೊತೆ ಕಾರ್ಯದರ್ಶಿ ಗಣೇಶ್ ಕುಮಾರ್, ರಾಜೇಶ್ ದೇವಾಡಿಗ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News