ಇರುವ ಒಂದು ರೈಲನ್ನೂ ವಿಸ್ತರಿಸುವುದು ಸರಿಯೇ?

Update: 2022-08-04 05:58 GMT

ಕಾರ್ಯಕಾರಿ ಕಾರ್ಯದರ್ಶಿ, ರೈಲ್ವೇ ಯಾತ್ರಿ ಸಂಘ ಮುಂಬೈ ಪ್ರಸ್ತುತ ಮಂಗಳೂರು ಬೆಂಗಳೂರು ಮಧ್ಯೆ ಸಂಚರಿಸುವ ಒಂದೇ ಒಂದು ರೈಲಿದ್ದು, ಆ ರೈಲು ಬೆಂಗಳೂರು-ಮೈಸೂರು-ಮಂಗಳೂರು ಎಕ್ಸ್ ಪ್ರೆಸ್ (ಸಂಖ್ಯೆ 16585/16586)ನ್ನು ಕಾರವಾರ/ಕಣ್ಣೂರಿಗೆ ವಿಸ್ತರಿಸಲು ಮೈಸೂರು ಸಂಸದರು ರೈಲು ಮಂತ್ರಿಯನ್ನು ಜುಲೈ 26ರಂದು ಭೇಟಿಯಾಗಿ ಸೂಚಿಸಿದ್ದಾರೆ. ದಕ್ಷಿಣ ಕನ್ನಡದ ಸಮಸ್ತ ಜನರಿಗೆ ಈ ಸೂಚನೆ ಖಂಡಿತ ವಾಗಿಯೂ ಸಮಾಧಾನ ತರುವಂತಹದ್ದಲ್ಲ. ಈ ಸೂಚನೆಯು ಮಂಗಳೂರು ಸುತ್ತಮುತ್ತಲಿನ ರೈಲು ಪ್ರಯಾಣಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ.

ರೈಲು ಸಂಖ್ಯೆ 16511ಮೊತ್ತಮೊದಲು ಪರಿಚಯಿಸಿದಾಗ ಅದು ಬೆಂಗಳೂರು-ಮಂಗಳೂರು ಮಧ್ಯೆ ಮಾತ್ರ ಸಂಚರಿಸುತ್ತಿತ್ತು. ಆಗ ಅದು ಸದಾ ಪ್ರಯಾಣಿಕರಿಂದ ಭರ್ತಿಯಾಗುತ್ತಿತ್ತು ತೀವ್ರ ವಿರೋಧದ ನಡುವೆಯೂ ಈ ರೈಲನ್ನು ಕಣ್ಣೂರಿಗೆ ವಿಸ್ತರಿಸಲಾಯಿತು. ಹಾಗೆಯೇ ಇನ್ನೊಂದು ರೈಲು (ಸಂಖ್ಯೆ 16515/16516) ಯಶವಂತಪುರದಿಂದ ಮಂಗಳೂರು ಸೆಂಟ್ರಲ್ ನಡುವೆ ಓಡುತ್ತಿತ್ತು. ಆನಂತರ ರೈಲು ಪ್ರಯಾಣಿಕರ ಹೆಚ್ಚಿನ ವಿರೋಧದ ನಡುವೆಯೂ ಈ ರೈಲನ್ನು ವೇಳಾ ಪಟ್ಟಿ ಪರಿಷ್ಕರಿಸಿ ಮಂಗಳೂರು ಸೆಂಟ್ರಲ್‌ನಿಂದ ಕಾರವಾರಕ್ಕೆ ವಿಸ್ತರಿಸಲಾಯಿತು. ಅನನುಕೂಲ ವೇಳಾಪಟ್ಟಿ ಹಾಗೂ ಕಾರವಾರ ವಿಸ್ತರಣೆಯಿಂದಾಗಿ ದಕ್ಷಿಣ ಕನ್ನಡದ ಪ್ರಯಾಣಿಕರಿಗೆ ತುಂಬಾ ಕಷ್ಟವಾಯಿತು. ಈಗಾಗಲೇ ಈ ಮೇಲಿನ ರೈಲುಗಳು ವಿಸ್ತರಣೆಯಿಂದಾಗಿ ಬವಣೆ ಪಡುತ್ತಿರುವ ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ರೈಲು ಸಂಖ್ಯೆ 16511 ಒಂದನ್ನು ಕ್ಯಾಲಿಕಟ್‌ಗೆ ವಿಸ್ತರಿಸಲು ನಿರ್ಧರಿಸಲಾಯಿತು. ಇದರಿಂದಾಗಿ ಮಂಗಳೂರು ಪ್ರದೇಶದ ಸಾರ್ವಜನಿಕರಿಗೆ ಆಸನ/ಬರ್ತ್ ಸೌಲಭ್ಯ ಕಡಿಮೆಯಾಗಿದೆ.

ಮಾಹಿತಿ ಹಕ್ಕಿನ ಮೂಲಕ ಸಿಕ್ಕಿದ ವಿವರಣೆಯಂತೆ 16511 ರೈಲಿನಲ್ಲಿ ಪ್ರತೀ ದಿನ 450ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿನಿಂದ ಮಂಗಳೂರಿಗೆ ಹಾಗೂ ಕೇವಲ 45 ಜನರು ಬೆಂಗಳೂರಿನಿಂದ ನೇರವಾಗಿ ಕಣ್ಣೂರಿಗೆ ಪ್ರಯಾಣಿಸಿದ್ದಾರೆಂದು ತಿಳಿದುಬಂತು. (ಇದು ಕಳೆದ ಆರ್ಥಿಕ ವರ್ಷದಲ್ಲಿನ ಸರಾಸರಿ ಪ್ರಯಾಣಿಕರು)

ಸಂಖ್ಯೆ 16585/16586 ರೈಲನ್ನು ಮಂಗಳೂರು ಸೆಂಟ್ರಲ್‌ಗೆ ತಲುಪಿಸದೆ ಮಂಗಳೂರು ಜಂಕ್ಷನ್ ಮುಖಾಂತರವೇ ಕಾರವಾರ-ಕಣ್ಣೂರಿಗೆ ವಿಸ್ತರಿಸಲು ಸೂಚಿಸಿದ್ದು ಬಲುದೊಡ್ಡ ತಪ್ಪು. ಇದರಿಂದಾಗಿ ಸುಬ್ರಹ್ಮಣ್ಯ-ಮಂಗಳೂರು ಸೆಂಟ್ರಲ್ ನಡುವೆ ಪ್ರಯಾಣಿಕರು ಜಂಕ್ಷನ್‌ನಲ್ಲಿ ಇಳಿದು ನೂರಾರು ರೂ. ರಿಕ್ಷಾಕ್ಕೆ ನೀಡಿ ಮಂಗಳೂರು ತಲುಪಬೇಕಾಗುತ್ತದೆ.

ಈಗಾಗಲೇ ಮಂಗಳೂರು-ಬೆಂಗಳೂರು ಮಧ್ಯೆ ಮಾತ್ರ ಓಡಾಡುತ್ತಿದ್ದ ಎರಡು ರೈಲುಗಳನ್ನು ಒಂದು ಕಾರವಾರಕ್ಕೆ ಹಾಗೂ ಒಂದು ಕಣ್ಣೂರಿಗೆ ವಿಸ್ತರಿಸಿ ಆಗಿದೆ. ಆದುದರಿಂದ ಬೆಂಗಳೂರು- ಮಂಗಳೂರು ಮಧ್ಯೆ ರೈಲು ಸೇವೆಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಘಟ್ಟ ಪ್ರದೇಶದಲ್ಲಿ ರಸ್ತೆ ಕುಸಿದು ಹಾಳಾಗಿ ಬಸ್ಸುಗಳ ಓಡಾಟ ಸಂಪೂರ್ಣವಾಗಿ ನಿಂತಿದೆ ಅಥವಾ ಸುತ್ತಿ ಬಳಸಿ ಪ್ರಯಾಣಿಸಬೇಕಾಗುತ್ತದೆ. ಆದುದರಿಂದ ಮಂಗಳೂರು- ಬೆಂಗಳೂರು ನಡುವೆ ಪ್ರತಿದಿನ ಇನ್ನೂ ಮೂರು ರೈಲುಗಳು ಓಡಾಟ ನಡೆಸಿದರೂ ಅವೆಲ್ಲ ಪ್ರಯಾಣಿಕರಿಂದ ಭರ್ತಿಯಾಗಲಿವೆ. ಹೀಗಿರುವಾಗ ಇದ್ದ ಒಂದೇ ಒಂದು ರೈಲನ್ನು ವಿಸ್ತರಿಸಿ ಮಂಗಳೂರಿಗರಿಗೆ ಕಷ್ಟ ಕೊಡುವುದು ತಪ್ಪಲ್ಲವೇ?

 ದಕ್ಷಿಣ ಕನ್ನಡದ ಜನರಿಗೆ ಇಂತಹ ಅನ್ಯಾಯವಾಗುತ್ತಿರುವಾಗ ನಮ್ಮ ಸಂಸದ, ಶಾಸಕರು ಕೂಡಲೇ ಎಚ್ಚೆತ್ತು ವಿಸ್ತರಣೆಯನ್ನು ನಿಲ್ಲಿಸಬೇಕು. ಮಂಗಳೂರಿನಲ್ಲಿ ಪೆಟ್ರೋ ಕೆಮಿಕಲ್ ರಿಫೈನರಿ, ಎಲ್ಲ ಋತುಗಳ ಪ್ರಮುಖ ಬಂದರು, ಹತ್ತಾರು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಇರುವುದರಿಂದ ಪ್ರತಿದಿನ ಸುಮಾರು 6000 ಜನರು ಬೆಂಗಳೂರು-ಮಂಗಳೂರು ಮಧ್ಯೆ ಪ್ರಯಾಣಿಸುತ್ತಾರೆ. ಆದರೆ ಇದೀಗ ಕೇವಲ ಒಂದು ರೈಲು ಮಾತ್ರ ಬೆಂಗಳೂರು ಮಂಗಳೂರು ಮಧ್ಯೆ ಓಡಾಡುತ್ತಿದ್ದು, ಅದನ್ನೂ ವಿಸ್ತರಿಸಿದರೆ ಮಂಗಳೂರು ಪ್ರಯಾಣಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದರ ವಿಸ್ತರಣೆ ಖಂಡಿತ ನ್ಯಾಯಸಮ್ಮತವಲ್ಲ.

ಈ ಬಗ್ಗೆ ರೈಲು ಸಂಘಗಳು ಹಾಗೂ ಇತರ ಸಂಘ ಸಂಸ್ಥೆಗಳು ರೈಲು ಮಂತ್ರಿಗೆ ಕಾಗದ ಬರೆದಿದ್ದು ನಮ್ಮ ವಿನಂತಿಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕಾಗಿದೆ.

Writer - ಒಲಿವರ್ ಡಿ’ಸೋಜಾ,

contributor

Editor - ಒಲಿವರ್ ಡಿ’ಸೋಜಾ,

contributor

Similar News