×
Ad

ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮನವಿಯ ಕುರಿತು ನಿರ್ಧಾರ ಕೈಗೊಳ್ಳಬೇಡಿ: ಚು.ಆಯೋಗಕ್ಕೆ ಸುಪ್ರೀಂ ಸೂಚನೆ

Update: 2022-08-04 12:14 IST

ಹೊಸದಿಲ್ಲಿ: ಶಿವಸೇನೆಯ ಮೇಲಿನ ಹಿಡಿತದ ಹೋರಾಟದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ  ಗುರುವಾರ 'ಬಿಗ್‌ ರಿಲೀಫ್‌' ನೀಡಿರುವ ಸುಪ್ರೀಂ ಕೋರ್ಟ್‌, ತನ್ನದೇ ನಿಜವಾದ ಶಿವಸೇನೆ ಎಂದು ಗುರುತಿಸಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಮನವಿಯ ಕುರಿತು ನಿರ್ಧಾರ ಕೈಗೊಳ್ಳಬೇಡಿ ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಶಿಂಧೆ ತಂಡಕ್ಕೆ ಪ್ರಮುಖ ಪ್ರಶ್ನೆಗಳನ್ನು ಕೇಳಿದರು.

 "ನೀವು ಆಯ್ಕೆಯಾದ ನಂತರ ರಾಜಕೀಯ ಪಕ್ಷಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರೆ  ಅದು ಪ್ರಜಾಪ್ರಭುತ್ವಕ್ಕೆ ಅಪಾಯವಲ್ಲವೇ" ಎಂದು ತಿಳಿಯಲು ನ್ಯಾಯಮೂರ್ತಿ ರಮಣ ಬಯಸಿದರು.

ಇದಕ್ಕೆ ಶಿಂಧೆ ಬಣವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ  “ಇಲ್ಲ’’ ಎಂದು ಉತ್ತರಿಸಿದರು.

ಠಾಕ್ರೆ ತಂಡವು ಚುನಾವಣಾ ಆಯೋಗವು ಈಗಲೇ ನಿರ್ಧಾರ ಕೈಗೊಳ್ಳುವುದನ್ನು ಬಯಸುತ್ತಿಲ್ಲ. ಶಿಂಧೆ ನೇತೃತ್ವದ "ಬಂಡಾಯ" ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗಳ ತೀರ್ಪು ಬರುವವರೆಗೆ ಚುನಾವಣಾ ಸಮಿತಿಯು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಂತೆ ತಡೆಯಲು ಇದಕ್ಕೂ ಮೊದಲು ಠಾಕ್ರೆ ತಂಡವು  ನ್ಯಾಯಾಲಯವನ್ನು ಕೇಳಿದೆ.

 ಚುನಾವಣಾ ಆಯೋಗವು ಆಗಸ್ಟ್ 8 ರೊಳಗೆ ಎರಡೂ ಕಡೆಯಿಂದ ಸಾಕ್ಷ್ಯವನ್ನು ಕೇಳಿದ್ದು ನಂತರ ವಿಷಯದ ವಿಚಾರಣೆ ನಡೆಸಲು  ನಿರ್ಧರಿಸಿತ್ತು.

ತನ್ನದೇ  ನಿಜವಾದ ಶಿವಸೇನೆ ಎಂದು ವಾದಿಸಿರುವ ಏಕನಾಥ್ ಶಿಂಧೆ, "15 ಶಾಸಕರ ಗುಂಪು 39 ಮಂದಿಯ ಗುಂಪನ್ನು ಬಂಡಾಯ ಎಂದು ಕರೆಯಲು ಸಾಧ್ಯವಿಲ್ಲ. ಇದು ವಾಸ್ತವವಾಗಿ ಉಲ್ಟಾ ಆಗಿದೆ" ಎಂದು ನ್ಯಾಯಾಲಯಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ಇಲ್ಲಿಯವರೆಗೆ ಶಿಂಧೆ ಅವರು ತನ್ನನ್ನು  ಬೆಂಬಲಿಸುವ ಮೂರನೇ ಎರಡರಷ್ಟು ಶಿವಸೇನೆ ಶಾಸಕರೊಂದಿಗೆ ವಿಧಾನಸಭೆಯಲ್ಲಿ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದಾರೆ. ಆದರೆ ಪಕ್ಷದ ಮೇಲೆ ಒಟ್ಟಾರೆಯಾಗಿ ಹಕ್ಕು ಸಾಧಿಸಲು ಇತರ ಕಾನೂನು ಅವಶ್ಯಕತೆಗಳ ಜೊತೆಗೆ ತಳಮಟ್ಟದ ಘಟಕಗಳಲ್ಲಿ ಬಹುಮತದ ಪುರಾವೆಯ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News