ಆ.7ರಿಂದ ಮಹಾಕವಿ ರತ್ನಾಕರವರ್ಣಿ ವಿರಚಿತ ಮಹಾಕಾವ್ಯ ಭರತೇಶ ವೈಭವ ವಾಚನ, ವ್ಯಾಖ್ಯಾನ ಸಪ್ತಾಹ

Update: 2022-08-04 06:48 GMT

ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಆಶ್ರಯದಲ್ಲಿ ಶ್ರೀ ಜೈನಧರ್ಮ ಜೀರ್ಣೋದ್ಧಾರಕ ಸಂಘ ಕಾರ್ಕಳ ಮತ್ತು ಭಾರತೀಯ ಜೈನ್‌ ಮಿಲನ್ ಸಹಯೋಗದೊಂದಿಗೆ ಕಾರ್ಕಳ ಭೈರವರಸರ ಆಸ್ಥಾನ ಕವಿ, ಸಾಂಗತ್ಯ ಚಕ್ರವರ್ತಿ ಮಹಾಕವಿ ರತ್ನಾಕರವರ್ಣಿ ವಿರಚಿತ ಮಹಾಕಾವ್ಯ ಭರತೇಶ ವೈಭವ ವಾಚನ - ವ್ಯಾಖ್ಯಾನ ಸಪ್ತಾಹವು ಬಾಹುವಲಿ ಪ್ರವಚನ ಮಂದಿರದಲ್ಲಿ ಆ. 7 ರಿಂದ 14 ರವರೆಗೆ ಪ್ರತಿದಿನ ಸಂಜೆ ಗಂಟೆ 7 ರಿಂದ 9 ರವರೆಗೆ ಜರುಗಲಿದೆ ಎಂದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹಾಗೂ ಜೈನಧರ್ಮ ಜೀರ್ಣೋದ್ಧಾರಕ ಸಂಘದ ಜೊತೆ ಕಾರ್ಯದರ್ಶಿ ಮೋಹನ್ ಪಡಿವಾಳ್  ತಿಳಿಸಿದ್ದಾರೆ.

ಆ. 7ರಂದು ಸಂಜೆ 4:30 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಕಳ ಶ್ರೀ ಜೈನಧರ್ಮ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದು, ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕೆ. ವಿಜಯ ಕುಮಾ‌ರ್‌, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎ. ಮೋಹನ್ ಪಡಿವಾಳ್, ಭಾರತೀಯ ಜೈನ್ ಮಿಲನ್ ವಲಯದ ನಿರ್ದೇಶಕ ಅಂಡಾರು ಕೆ. ಮಹಾವೀರ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಆ. 7 ಮತ್ತು 14ರಂದು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಂದ ಹಾಡುಗಾರಿಕೆಯು ಮೂಡಿಬರಲಿದೆ. ಆ. 8 ಸೋಮವಾರದಿಂದ 13 ಶನಿವಾರದವರೆಗೆ ಖ್ಯಾತ ಯಕ್ಷಗಾನ ಭಾಗವತೆ ಕಾವ್ಯಶ್ರೀ ಆಜೇರು ಇವರಿಂದ ಹಾಡುಗಾರಿಕೆ. ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ, ಗುರುವಾಯನಕೆರೆ ಮದ್ದಳೆ ವಾದಕರಾಗಿ ಸಹಕಾರ ನೀಡಲಿರುವರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ವ್ಯಾಖ್ಯಾನ ನಡೆಸಿಕೊಡಲಿದ್ದಾರೆ.

ಸಮಾರೋಪ ಸಮಾರಂಭ

ಆ. 14ರಂದು ಸಂಜೆ ಗಂಟೆ 4-30ಕ್ಕೆ ಸಮಾರೋಪ ಸಮಾರಂಭವು ಜರುಗಲಿದ್ದು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಸಿ. ಕೆ. ಕಿಶೋರ್‌ ಕುಮಾರ್‌, ಮ.ವಿ.ವಿ. ಪರೀಕ್ಷಾಂಗದ ಕುಲಸಚಿವ ಪಿ. ಎಲ್.‌ ಧರ್ಮ, ನ್ಯಾಯವಾದಿ ಎಂ. ಕೆ. ಸುವೃತ್‌ ಕುಮಾರ್‌, ಮ.ವಿ.ವಿ. ಹಣಕಾಸು ಅಧಿಕಾರಿ ಕೆ. ಎಸ್.‌ ಜಯಪ್ಪ, ಕಾರ್ಕಳ ಜೈನ್‌ ಮಿಲನ್‌ ಅಧ್ಯಕ್ಷೆ ಮಾಲತಿ ವಸಂತ್ ರಾಜ್‌ ಮತ್ತು ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸದಸ್ಯ ಯೋಗರಾಜ್‌ ಜೈನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಮೋಹನ್ ಪಡಿವಾಳ್ ತಿಳಿಸಿದ್ದಾರೆ.

ಕಾರ್ಕಳ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುನಿರಾಜ ರೆಂಜಾಳ, ಆದಿರಾಜ್ ಅಜ್ರಿ, ಶಿಶುಪಾಲ್ ಜೈನ್, ಗುಣವರ್ಮ ಜೈನ್, ಅಭಯ ಕುಮಾರ್ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News